ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೆವರಿಳಿಸಿದ ಐಎಫ್‌ಎಸ್ ಅಧಿಕಾರಿ ಸ್ನೇಹಾ ದುಭೆ

ಯುಎಸ್ಎ: ಪದೇ ಪದೇ ಕದನ ವಿರಾಮ ನೀತಿ ಉಲ್ಲಂಘಿಸುವ ಪಾಕಿಸ್ತಾನ ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ದಮನಕಾರಿ ನಿಲುವು ತೆಗೆದುಕೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ ಪ್ರದೇಶವನ್ನು ಕೂಡಲೇ ತೊರೆಯಬೇಕು ಎಂದು ಪಾಕಿಸ್ತಾನಕ್ಕೆ ಭಾರತದ ಐಎಫ್‌ಎಸ್ ಅಧಿಕಾರಿ ಹಾಗೂ ವಿಶ್ವಸಂಸ್ಥೆ ಮಹಾಧಿವೇಶನದ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನ ಭಯೋತ್ಪಾದಕತೆಯನ್ನು ಹಿಂಬಾಗಿಲ ಮೂಲಕ ಪೋಷಿಸುತ್ತಿದೆ. ತಮ್ಮ ಭಯೋತ್ಪಾದಕ ಕೃತ್ಯಗಳನ್ನು ಮುಚ್ಚಿಡಲು ಅದು ಪ್ರಯತ್ನಿಸುತ್ತಿದೆ. ಪಾಕ್ ಆಕ್ರಮಿಸಿರುವುದು ಭಾರತದ ಜಾಗ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಗಳನ್ನು ಪದೇ ಪದೇ ದುರುಪಯೋಗ ಮಾಡಿಕೊಳ್ಳುತ್ತಿದೆ. ಆದರೆ, ಈ ವೇದಿಕೆಯಲ್ಲಿ ನಾವು ನಮ್ಮ ಧ್ವನಿ ಎತ್ತಲು ಬಳಸಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಸ್ನೇಹಾ ದುಬೆ 2012ರ ಬ್ಯಾಚ್ನ ಐಎಫ್‌ಎಸ್ ಅಧಿಕಾರಿ. ಗೋವಾದಲ್ಲಿ ಶಾಲಾ ಶಿಕ್ಷಣ ಮುಗಿಸಿರುವ ಇವರು ಪುಣೆಯ ಫೆರ್ಗುಸನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನಿಂದ ಎಂಫಿಲ್ ಪದವಿ ಪಡೆದಿದ್ದಾರೆ.
ಸ್ನೇಹಾ 12 ವರ್ಷದವಳಿದ್ದಾಗಲೇ ಭಾರತೀಯ ವಿದೇಶಿ ಸೇವೆ ಸೇರಲು ಇಚ್ಛಿಸಿದ್ದಳು. ಇದರ ಪರಿಣಾಮವಾಗಿ 2011ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿಯ ನಾಗರೀಕ ಸೇವೆ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು.
