ಭಾರತದ ಮಾಧ್ಯಮಗಳಿಗೆ ಬೈಡೆನ್ ಬೈದಿದ್ದೋ, ಹೊಗಳಿದ್ದೋ..?!

ಕಿರುಗುಂದ ರಫೀಕ್
“ಭಾರತೀಯ ಮಾಧ್ಯಮಗಳು ಅಮೆರಿಕದ ಮಾಧ್ಯಮಗಳಿಗಿಂತ ಉತ್ತಮ ನಡವಳಿಕೆ ಹೊಂದಿವೆ” ಎಂದು ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಎದುರಿಗೇ ಕೂರಿಸಿಕೊಂಡು ಹೇಳಿರುವ ಮಾತು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಮೆರಿಕಕ್ಕೆ ಮೂರು ದಿನಗಳ ಪ್ರವಾಸ ತೆರಳಿದ್ದ ಪ್ರಧಾನಿ ಮೋದಿಯೊಂದಿಗೆ ಅಧ್ಯಕ್ಷ ಜೊ ಬೈಡೆನ್ ಪ್ರಥಮ ದ್ವಿಪಕ್ಷೀಯ ಸಭೆ ಆರಂಭಿಸುವಾಗ ಬೈಡನ್ ಈ ಮಾತು ಹೇಳಿದ್ದಾರೆ.
ಅವರು ಅಷ್ಟೇ ಹೇಳಿದ್ದಲ್ಲ; ಭಾರತೀಯ ಮಾಧ್ಯಮಗಳು ಉತ್ತಮವಾಗಿ ವರ್ತಿಸುತ್ತಿವೆ ಎನ್ನುತ್ತಲೇ ನೀವು ಮಾಧ್ಯಮಕ್ಕೆ ಉತ್ತರಿಸಬೇಕಾದ ಅಗತ್ಯವೇ ಇಲ್ಲ; ಏಕೆಂದರೆ ಅವರು ನಿಮ್ಮನ್ನು ಪ್ರಶ್ನಿಸುವುದೇ ಇಲ್ಲ” ಎಂದು ಹೇಳುವ ಮೂಲಕ ಭಾರತೀಯ ಮಾಧ್ಯಮಗಳನ್ನು ಟೀಕಿಸಿರುವಂತೆ ಮಾತನಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಮೌನವಾಗಿ ಸಮ್ಮತಿ ಸೂಚಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ!
ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ಆಡಳಿತ ಪಕ್ಷ ಬಿಜೆಪಿಯ ಪರವಾಗಿ ಭಾರತದ ಹಲವು ಸುದ್ದಿಮಾಧ್ಯಮಗಳು ಕೆಲಸ ಮಾಡುತ್ತವೆ ಎಂಬ ಆರೋಪ ಇರುವಂತೆಯೇ ಬೈಡೆನ್ ಹೇಳಿರುವ ಮಾತುಗಳು ಈಗ ಅಂತಹ ಪಕ್ಷಪಾತಿ ಮಾಧ್ಯಮಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಮೆರಿಕ ಮಾಧ್ಯಮಗಳು ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಹೆಚ್ಚು ಸುದ್ದಿಗಳನ್ನು ಸಂವಹನಗೊಳಿಸುತ್ತವೆ. ಯಾರೇ ಅಧ್ಯಕ್ಷರಾಗಿದ್ದರೂ ಬಹುತೇಕ ಮಾಧ್ಯಮಗಳು ಅಲ್ಲಿನ ಅಧ್ಯಕ್ಷರ ಪರವಾಗಿ ಮಾತನಾಡುವುದಿಲ್ಲ ಎಂಬ ಅಂಶವನ್ನು ಬೈಡೆನ್ ಹೇಳಿಕೆಯಿಂದ ತಿಳಿಯಬಹುದಾಗಿದೆ.
ಭಾರತದ ಪ್ರಧಾನಿ ಮೋದಿಯವರಿಗೆ ಮಾಧ್ಯಮಗಳು ಸಾಥ್ ನೀಡಿದಂತೆ, ಅಮೆರಿಕದಲ್ಲಿ ತಮ್ಮ ಪರವಾಗಿ ಮಾಧ್ಯಮಗಳು ಇಲ್ಲವಲ್ಲ ಎಂಬ ತಲೆನೋವು ಬೈಡೆನ್ ಅವರನ್ನು ಕಾಡುತ್ತಿದ್ದರಿಂದಲೇ ಇಂತಹ ಅಣಿಮುತ್ತುಗಳು ಬೈಡೆನ್ ಬಾಯಿಂದ ಉದುರಿವೆ!
