
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಪಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಶಪಥ ಮಾಡಿದ್ದಾರೆ.
ಸುವರ್ಣಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಗಳು ಸಮಾಜದ ಹಿತಚಿಂತನೆಯನ್ನು ಒಳಗೊಂಡಿಲ್ಲ ಬದಲಾಗಿ ಒಂದು ಕೋಮು, ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಮಸೂದೆ ಜಾರಿ ಮಾಡಲಾಗುತ್ತಿದೆ ಇದಕ್ಕೆ ಕಾಂಗ್ರೆಸ್ ಪಕ್ಷದ ವ್ಯಾಪಕ ವಿರೋಧವಿದೆ ಎಂದರು.
ಬಿಜೆಪಿ ಬಹುಮತವಿದೆ ಎಂಬ ಅಹಂಕಾರದಿಂದ ಇಂತಹ ಜನವಿರೋಧಿ ಮಸೂದೆ ಜಾರಿಗೆ ತರಲು ಹೊರಟಿದೆ. ಬಿಜೆಪಿ ಸರಕಾರಕ್ಕೆ ಕರ್ನಾಟಕದಲ್ಲಿ ಇಲ್ಲಿವರೆಗೂ ಸ್ಪಷ್ಟ ಬಹುಮತ ದೊರೆತಿಲ್ಲ. ಜನಾದೇಶವನ್ನು ಸರಿಯಾಗಿ ಪಡೆಯದ ಸರ್ಕಾರ ಜನ ವಿರೋಧಿ ಮಸೂದೆ ಮಂಡಿಸಿ ತೊಂದರೆ ಕೊಡಲು ಹೊರಟಿದೆ ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಹಿಂದೂಗಳಿಗೆ ಹೆಚ್ಚು ತೊಂದರೆ
ಗೋಹತ್ಯೆ ನಿಷೇಧ ಮಸೂದೆಯಿಂದ ಮುಸ್ಲಿಂ ಸಮುದಾಯ ಇವರ ತೊಂದರೆಗೆ ಒಳಗಾಗಿದ್ದಾರೆ ಎಂಬ ಭಾವನೆ ಸಾರ್ವತ್ರಿಕ ವಲಯದಲ್ಲಿ ಮೂಡಿದೆ. ಆದರೆ ಮುಸ್ಲಿಂ ಸಮುದಾಯಕಿಂತಲೂ ಈ ಕಾಯ್ದೆಯಿಂದ ಹಿಂದೂ ಸಮುದಾಯವೇ ಬಹಳ ತೊಂದರೆ ಮತ್ತು ನೋವು ಅನುಭವಿಸುತ್ತಿದೆ.
30, 40 ಸಾವಿರ ರೂ ಕೊಟ್ಟು ಜಾನುವಾರು ಖರೀದಿಸಿದ ರೈತರು ಕಡೆಗೆ ಅವುಗಳಿಗೆ ವಯಸ್ಸಾದ ನಂತರ ಸಾಕಲು ಸಾಧ್ಯವಾಗದೆ ಕೇಳಿದ ಬೆಲೆಗೆ ಕೊಡುವಂತಹ ದಾರುಣ ಪರಿಸ್ಥಿತಿ ಬಂದಿದೆ. ಈ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕಿಂತಲೂ ಹಿಂದೂ ರೈತ ಕುಟುಂಬಗಳೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇಂತಹ ರೈತ ಕುಟುಂಬಗಳಿಗೆ ಸರ್ಕಾರದಿಂದಲೂ ಯಾವುದೇ ರೀತಿಯ ಪರಿಹಾರ ದೊರಕುತ್ತಿಲ್ಲ ರೈತರನ್ನು ಸಂಕಷ್ಟಕ್ಕೆ ನೂಕುವ ಉದ್ದೇಶದಿಂದಲೇ ಗೋಹತ್ಯೆ ನಿಷೇಧ ಮಸೂದೆ ತರಲಾಗಿದೆ ಎಂದು ಶಿವಕುಮಾರ್ ಕಿಡಿಕಾಡಿದರು.
