ಕೃಷ್ಣ ಮೇಲ್ದಂಡೆ ವಿಚಾರದಲ್ಲಿ ಕಾಂಗ್ರೆಸ್ ಅಪರಾಧಿ : ಗೋವಿಂದ ಕಾರಜೋಳ ಆರೋಪ

ಬೆಳಗಾವಿ : ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 8 ವರ್ಷ ಹಿಂದೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿ ದೇಹದ ತೂಕ ಇಳಿಸಿಕೊಂಡರೆ ಹೊರತು ಜನತೆಯ ಭಾರ ಕಡಿಮೆ ಮಾಡಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ವಿಧಾನಪರಿಷತ್ತಿನಲ್ಲಿ ಗುರುವಾರ ವ್ಯಂಗ್ಯವಾಡಿದರು.
ಕೃಷ್ಣ ಮೇಲ್ದಂಡೆ ಯೋಜನೆಯ ಅನುಷ್ಠಾನ ವಿಷಯದಲ್ಲಿ ಅಪರಾಧಿ ಸ್ಥಾನದಲ್ಲಿರುವುದು ಕಾಂಗ್ರೇಸ್ ಹೊರತು ಬಿ.ಜೆ.ಪಿ ಅಲ್ಲ ಎಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಪ್ರಕಾಶ್, ರಾಠೋಡ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, 2013 ರಲ್ಲಿ ಕಾಂಗ್ರೆಸ್ನವರ ಪಾದಯಾತ್ರೆ ಸಂದರ್ಭದಲ್ಲಿ ವಿಶೇಷ ಪುರವಣಿ ಪ್ರಕಟಿಸಿ ಅಬ್ಬರದ ಪ್ರಚಾರ ಮಾಡಿತ್ತು ಎಂದರು.
ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಘೋಷಿಸಿ, 6½ ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ್ ಮತ್ತು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯು.ಕೆ.ಪಿ ಗೆ ಖರ್ಚು ಮಾಡಿದ್ದು, ಕೇವಲ 7,728 ಕೋಟಿ ರೂಪಾಯಿ ಎಂದರು.
ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಜಯಪುರ ಜಿಲ್ಲೆಯವರಾಗಿದ್ದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಯಾವುದೇ ಕಾಳಜಿ ತೋರಲಿಲ್ಲ ಎಂದು ಸಚಿವ ಕಾರಜೋಳ ಆರೋಪಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಕಾಶ್ ರಾಠೋಡ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾವುದೇ ಯೋಜನೆ ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕಾದರೆ ಅಂತರ್ರಾಜ್ಯ ಜಲವಿವಾದ ಪೂರ್ಣವಾಗಿ ಬಗೆಹರಿದಿರಬೇಕು ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಯ ಅಂತರ ರಾಜ್ಯ ವಿವಾದ ಸುಪ್ರೀಂ ಕೋರ್ಟ್ನಲ್ಲಿ ಇರುವುದರಿಂದ ವಿಳಂಬವಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ನ್ಯಾಯಾಧೀಕರಣದ ಅಂತಿಮ ಐತೀರ್ಪು ಗೆಜೆಟ್ನಲ್ಲಿ ಪ್ರಕಟಗೊಂಡ ತಕ್ಷಣ ಈ ವಿವಾದ ಬಗೆ ಹರಿಯುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೂರು ಸಾರಿ ನವದೆಹಲಿಗೆ ಪ್ರಯಾಣ ಮಾಡಿ ಕೇಂದ್ರ ಜಲಶಕ್ತಿ ಸಚಿವರು ಮತ್ತು ಜಲಶಕ್ತಿ ಮಂತ್ರಾಲಯದ ಉನ್ನತ ಅಧಿಕಾರಿಗಳೊಂದಿಗೆ ಕರ್ನಾಟಕದ ಯೋಜನೆಗಳನ್ನು ತ್ವರಿತವಾಗಿ ಅನುಮೋದಿಸುವಂತೆ ಕೋರಲಾಗಿದೆ ಎಂದೂ ಅವರು ತಿಳಿಸಿದರು.
