ಉದ್ಯೋಗದ ಆಮಿಷ: ಹನಿ ಟ್ರಾಪ್ ; ಮಹಿಳೆ ಸೇರಿ ಮೂವರ ಸೆರೆ

ಕಾರವಾರ : ಉದ್ಯೋಗ ಕೊಡಿಸುವುದಾಗಿ ಹನಿಟ್ರಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಮಹಿಳೆ ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುರುವಾರ ನಡೆದಿದೆ. ಶಿರಸಿಯ ಉಂಚಳ್ಳಿಯ ಅಜಿತ್ ಶ್ರೀಕಾಂತ ನಾಡಿಗ ( 25),ಬನವಾಸಿಯ ಗೋಲಗೇರಿ ಓಣಿಯ ಧನುಷ್ಯಕುಮಾರ ದಿಲೀಪಕುಮಾರ ಶೆಟ್ಟಿ (25) ಹಾಗೂ ಶಿವಮೊಗ್ಗ ನಗರದ ರಂಗನಾಥ ಬಡಾವಣೆ ಗೋಪಾಳದ ಪದ್ಮಜಾ ಡಿ.ಎನ್.(50) ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ಹಿನ್ನೆಲೆ
ಶಿರಸಿ ಮೂಲದ ವ್ಯಕ್ತಿಗೆ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ ಕಳೆದ ಜನವರಿ 17 ರಂದು ಶಿವಮೊಗ್ಗಕ್ಕೆ ಕರೆಯಿಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ನಗ್ನಗೊಳಿಸಿ, ಮಹಿಳೆಯೊಂದಿಗೆ ಪೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ.
ಈ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಬೆದರಿಸಿ 15 ಲಕ್ಷ ರೂ.ಹಣಕ್ಕೆ ಬೇಡಿಕೆ ಇಟ್ಟಿದ್ದು,ಜನವರಿ 18 ರಂದು ಶಿರಸಿ ಮೂಲದ ವ್ಯಕ್ತಿಯ ತಂದೆಯ ಬಳಿ ಹೋಗಿ ನಿಮ್ಮ ಮಗ ಮಹಿಳೆಯ ಜೊತೆಗೆ ಇರುವ ಕೆಲವು ನಗ್ನ ಫೋಟೋಗಳು ಮತ್ತು ವಿಡಿಯೋಗಳು ಇವೆ.ಅವುಗಳನ್ನು ಡಿಲಿಟ್ ಮಾಡಲು ಮತ್ತು ನಿಮ್ಮ ಮಗ ಜೀವಂತವಾಗಿ ಬರಲು 15 ಲಕ್ಷ ರೂ.ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಬಲವಂತವಾಗಿ,ಭದ್ರತೆಗಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ ಸುಳ್ಳು ಕರಾರು ಪತ್ರ ಬರೆಸಿಕೊಂಡಿದ್ದಲ್ಲದೇ ಬ್ಲ್ಯಾಂಕ್ ಚೆಕ್ ಪಡೆದಿದ್ದರು.ಒಂದು ವೇಳೆ ಹಣ ಕೊಡದೇ ಇದ್ದರೆ ಬಲತ್ಕಾರದ ದೂರು ದಾಖಲಿಸುವುದಾಗಿ ಇಲ್ಲವೇ ಕೊಲೆ ಮಾಡುವುದಾಗಿ ಬೆದರಿಸಿದ್ದರು.
ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ನೊಂದ ವ್ಯಕ್ತಿ ಬುಧವಾರದಂದು ದೂರು ದಾಖಲಿಸಿದ್ದರು.ಈ ಪ್ರಕರಣದಲ್ಲಿ ಆರೋಪಿಗಳ ಶೀಘ್ರ ಪತ್ತೆಗಾಗಿ ತಂಡ ರಚಿಸಿ ಕೊನೆಗೂ ಒಂದು ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಚರಣೆಯು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಭದ್ರಿನಾಥ,ಶಿರಸಿ ಡಿ.ವೈ.ಎಸ್.ಪಿ. ರವಿ ಡಿ.ನಾಯ್ಕ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಸಿ.ಪಿ.ಐ ರಾಮಚಂದ್ರ ನಾಯಕ ಹಾಗೂ ಸಿಬ್ಬಂದಿಯವರಾದ ಮಹಾಂತೇಶ ಬಾರಕೇರ,ಅಶೋಕ ನಾಯ್ಕ,ರಾಮಯ್ಯ ಪೂಜಾರಿ,ವಿದ್ಯಾ ಎಚ್.ವಿ, ಯಶೋದಾ ನಾಯ್ಕ,ಪಾಂಡು ನಾಗೋಜಿ ಅವರು ಭಾಗವಹಿಸಿದ್ದರು.
