Breaking NewsLatestಚಿಕ್ಕಮಗಳೂರುಜಿಲ್ಲಾ ಸುದ್ದಿ
ಮಲೆನಾಡು-ಕರಾವಳಿಯಲ್ಲಿ ಭಾರೀ ಮಳೆ; ಜನಜೀವನ ತತ್ತರ

ಚಿಕ್ಕಮಗಳೂರು: ಮಲೆನಾಡು-ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಸಾಕಷ್ಟು ಹಾನಿ-ಅವಘಡಗಳು ಸಂಭವಿಸುತ್ತಿವೆ. ಜನಜೀವನ ತತ್ತರಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಅವಘಡಗಳು ಸಂಭವಿಸಿವೆ. ಮುತ್ತೋಡಿಯಲ್ಲಿ ರಸ್ತೆಯೊಂದು ಕುಸಿದು ಪಾತಾಳ ಸೇರಿದೆ. ಹೊನ್ನಾಳ ಚೆಕ್ ಪೋಸ್ಟ್ ಬಳಿ ಭೂಕಂಪವಾದಂತೆ ರಸ್ತೆ ಮಧ್ಯೆ ಬಿರುಕುಂಟಾಗಿ ಸಂಪರ್ಕ ಕಡಿತಗೊಂಡಿದೆ. ಶೃಂಗೇರಿ – ಹೊರನಾಡು ಮಾರ್ಗದ ಅಬ್ಬಿಕಲ್ಲು ಎಂಬಲ್ಲಿ ಭೂ ಕುಸಿತಗೊಂಡು ಹಲವು ಮರಗಳು ರಸ್ತೆಗೆ ಅಪ್ಪಳಿಸಿ ವಾಹನ ಸಂಚಾರ ಸ್ಥಗಿತಗೊಂಡು ಈ ಭಾಗದ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ತುಂಗಾ-ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿವೆ. ಕಳಸ ತಾಲೂಕಿನ ಹೆಬ್ಬಾಳ ಸೇತುವೆ ಮುಳುಗಡೆಯ ಭೀತಿ ಎದುರಾಗಿದೆ. ಶಿಥಿಲಾವಸ್ಥೆ ತಲುಪಿರುವ ಈ ಸೇತುವೆ ಕುಸಿಯಬಹುದಾದ ಅಪಾಯದಲ್ಲಿದೆ. ಕರಾವಳಿ ಭಾಗದ ಮಂಗಳೂರು, ಕಾಸರಗೋಡು ಸಹಿತ ಹಲವೆಡೆ ವ್ಯಾಪಕ ಮಳೆ ಸುರಿಯತೊಡಗಿದೆ.
