Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಕೋವಿಡ್ ಕಾಲದಲ್ಲಿ ಕುದುರೆ ರೇಸ್ ಗೆ ಸರ್ಕಾರದ ಅನುಮತಿ! ಡಿಕೆಶಿ ಆಕ್ಷೇಪ

ಬೆಂಗಳೂರು: ಕೋವಿಡ್ ಕಾಲದಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಅಲ್ಟ್ರಾ ಡರ್ಬಿ ಬೆಂಗಳೂರು ರೇಸ್ ನಡೆಸಿರುವ ವಿಷಯ ಈಗ ವಿವಾದಕ್ಕೆಡೆ ಮಾಡಿಕೊಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ 500 ಮಂದಿಗೆ ಮಾತ್ರ ಪ್ರವೇಶ. ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ. ಹೋಟೆಲ್‌ ಮೊದಲಾದ ಕಡೆ 50:50 ನಿಯಮ. ಆದರೆ, ಇಂದು ಆರಂಭವಾದ ‘ಅಲ್ಟ್ರಾ ಡರ್ಬಿ ಬೆಂಗಳೂರು‘ ರೇಸ್‌ಗೆ ಯಾವುದೇ ಕೋವಿಡ್‌ ನಿಯಮಗಳು ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ನಾಡಿನ ಕುಡಿಯುವ ನೀರಿನ ಬವಣೆ ನೀಗಿಸಲು ಕಾಂಗ್ರೆಸ್‌ ಪಕ್ಷ ಕೈಗೊಂಡ ಮೇಕೆದಾಟು ಪಾದಯಾತ್ರೆಗೆ ಬಿಜೆಪಿ ಏನೆಲ್ಲಾ ಕಳಂಕ ಹಚ್ಚಿತು. ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಆರೋಪದ ಮೇಲೆ ನನ್ನನ್ನೂ ಸೇರಿದಂತೆ ಕಾಂಗ್ರೆಸ್‌ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ. ಕೋವಿಡ್‌ ಬಿಕ್ಕಟ್ಟಿನ ಮಧ್ಯೆಯೂ ರೇಸ್‌ ನಡೆಸಲು ಸರ್ಕಾರ ಅನುಮತಿ ನೀಡಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಟ್ರಾ ಡರ್ಬಿ ಬೆಂಗಳೂರು ರೇಸ್ ನಡೆಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಟ್ವೀಟ್ ಮಾಡಿದ್ದೇನೆ. ನಾವು ರಾಜ್ಯದ ಹಿತಕ್ಕಾಗಿ ಪಾದಯಾತ್ರೆ ಮಾಡಿದಾಗ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರು, ಗೃಹಮಂತ್ರಿಗಳು ಗಮನಹರಿಸಲಿ ಎಂದರು.

ರಾಜ್ಯಾದ್ಯಂತ ಬಿಜೆಪಿ ನಾಯಕರು ಸಾಕಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾರೆ. ರೇಸ್ ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಅಧಿಕಾರಿಗಳು ಇದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವೂ ಇದೆ.  ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂದು ನೋಡಿಕೊಂಡು, ಈ ವಿಚಾರವಾಗಿ ಕೋರ್ಟ್ ಗೆ ಮಾಹಿತಿ ನೀಡಬೇಕೋ ಅಥವಾ ನಾವು ಏನು ಮಾಡಬಹುದು ಎಂಬುದನ್ನು ತೀರ್ಮಾನಿಸುತ್ತೇವೆ ಎಂದೂ ಹೇಳಿದರು.

ಇಬ್ರಾಹಿಂರದು ನೋವಿನಿಂದ ಮಾತು

ಕಾಂಗ್ರೆಸ್ ತ್ಯಜಿಸಲು ನಿರ್ಧರಿಸಿರುವ ಹಿರಿಯ ಧುರಿಣ ಸಿ.ಎಂ.ಇಬ್ರಾಹಿಂ ಅವರ ಜತೆ ಚರ್ಚಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನ ಇರುತ್ತದೆ ಹೀಗಾಗಿ ಅವರು ಮಾತನಾಡಿದ್ದಾರೆ. ಅವರು ನಮ್ಮ ಸ್ನೇಹಿತರು, ನಮಗೆ ಒಳ್ಳೆಯದನ್ನು ಬಯಸಿದ್ದಾರೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಖಂಡಿತವಾಗಿಯೂ ಅವರ ಜತೆ ಮಾತನಾಡುತ್ತೇನೆ’ ಎಂದರು.

ಇಬ್ರಾಹಿಂ ಅವರು ಹಿರಿಯ ನಾಯಕರು. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರ ಕಾಲದಲ್ಲಿ ಹಾಲಿ ಶಾಸಕರನ್ನು ಬಿಟ್ಟು ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋತ  ನಂತರವೂ ಅವರಿಗೆ ಸಂಪುಟ ಸ್ಥಾನಮಾನ ನೀಡಿ ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಸತತ ಎರಡು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಈಗ ಅವರು ನೋವಿನಿಂದ ಮಾತನಾಡಿದ್ದಾರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು.

ಯಾರೂ ತಬ್ಬಲಿಯಲ್ಲ

ಕಾಂಗ್ರೆಸ್ ನಲ್ಲಿ ಇಬ್ರಾಹಿಂ, ನಾನು, ಸಿದ್ದರಾಮಯ್ಯ ಅವರು ಸೇರಿದಂತೆ ಯಾರೂ ತಬ್ಬಲಿಯಾಗಿಲ್ಲ. ನಾವೆಲ್ಲಾ ಒಂದೇ’ ಎಂದು ಪುನರುಚ್ಚರಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button