ಸೇಬು ಹಣ್ಣು ಕೊಳೆತರೆ ಗೊಬ್ಬರಕ್ಕೂ ಆಗದು: ಈಶ್ವರಪ್ಪಗೆ ಟಾಂಗ್ ಕೊಟ್ಟ ಕಾಂಗ್ರೆಸ್

ಚಿಕ್ಕಮಗಳೂರು: ಕೊಳೆತ ಮಾವಿನಹಣ್ಣು ಭೂಮಿ ಮೇಲೆ ಬಿದ್ದರೆ ಅದು ಮೊಳಕೆಯೊಡೆದು ಚಿಗುರಿ ದಷ್ಟ ಪುಷ್ಟವಾಗಿ ಬೆಳೆದು ಮರವಾಗಿ ಫಲ ನೀಡುತ್ತದೆ. ಆದರೆ, ಸೇಬು ಹಣ್ಣು ಕೊಳೆತರೆ ಗೊಬ್ಬರಕ್ಕೂ ಪ್ರಯೋಜನವಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ನಗರದಲ್ಲಿ ನಿನ್ನೆ ಸಚಿವ ಕೆ ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕೊಳೆತ ಮಾವಿನ ಹಣ್ಣು, ಮೋದಿ ಶೈನಿಂಗ್ ಆಪಲ್ ಎಂದು ಬಣ್ಣಿಸಿದ್ದರು. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಾಧ್ಯ ಜಿ.ಕಾರ್ತಿಕ್ ಚೆಟ್ಟಿಯಾರ್ ಪ್ರತಿಕ್ರಿಯೆ ನೀಡಿದ್ದು, ಸಚಿವ ಈಶ್ವರಪ್ಪ ಮೊದಲು ದೇಶದ ಹಾಗೂ ನಮ್ಮ ಪಕ್ಷದ ಇತಿಹಾಸವನ್ನು ತಿಳಿದು ಮಾತನಾಡಲಿ, ಅವರು ಬಾಯಿಗೆ ಬಂದಂತೆ ಮಾತನಾಡುವುದು ಸಚಿವ ಸ್ಥಾನಕ್ಕೆ ಶೋಭೆಯಲ್ಲ ಎಂದು ವಾಗ್ದಾಳಿ ನಡೆಸಿದರು.
ಕೊಳೆತ ಮಾವಿನಹಣ್ಣಿನ ಬಳಿ ಜನರು ಹೋಗುವುದಿಲ್ಲ ಎನ್ನುವ ನೀವು ಕಾಂಗ್ರೆಸ್ನ ಮಾವಿನ ಹಣ್ಣನ್ನು ಖರೀದಿಸಿಯೇ ಬಿಜೆಪಿ ಇಂದು ಅಧಿಕಾರ ಹಿಡಿದಿದೆ ಎಂಬುದು ಮತ್ತು ನೀವೂ ಕೂಡ ಸಚಿವರಾಗಿರುವುದನ್ನು ಮರೆತಿದ್ದೀರಿ, ಚಿಕ್ಕಮಗಳೂರು ಜಿಲ್ಲೆಗೆ ನೀವು ಮೂರನೇ ಉಸ್ತುವಾರಿ ಸಚಿವರಾಗಿದ್ದೀರಾ ಇನ್ನು ಎಷ್ಟು ದಿನದಲ್ಲಿ ನಿಮ್ಮ ಉಸ್ತುವಾರಿ ಮುಗಿಯಲಿದೆ ಎಂಬುದನ್ನು ಜನರಿಗೆ ತಿಳಿಸಿ ಎಂದು ಕುಟುಕಿದ್ದಾರೆ.

ಕೋವಿಡ್ ಸಮಯದಲ್ಲಿ ಸರ್ಕಾರದಿಂದ ಪರಿಹಾರ ಇನ್ನೂ ಜನರ ಕೈಗೆ ತಲುಪಿಲ್ಲ. ಅದರ ಬಗ್ಗೆ ಸ್ವಲ್ಪ ಗಮನಹರಿಸಿದರೆ ಒಳಿತು. ಕೆಲವು ಕಡೆ ತಮ್ಮ ಸರ್ಕಾರ ಕೊವೀಡ್ನಿಂದ ಮೃತಪಟ್ಟ ಕುಟುಂಬಕ್ಕೆ ನೀಡಿರುವ ಚೆಕ್ ಸಹ ಬ್ಯಾಂಕಿನಿಂದ ವಾಪಸ್ ಆಗುತ್ತಿದೆ. ಇನ್ನೇನು ಸ್ವಲ್ಪ ದಿನಗಳಲ್ಲಿ ನಿಮ್ಮ ಸರ್ಕಾರ ಸಹ ಬೌನ್ಸ್ ಆಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರಿಗೆ ದೇಶದ ಜನರ ಹಿತ ಮುಖ್ಯವಲ್ಲ. ಅವರಿಗೆ ಅಧಿಕಾರ ಬೇಕೆ ಹೊರತು ಜನರ ಕಷ್ಟಸುಖಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಚಾಶಕ್ತಿಯನ್ನು ಬೆಳೆಸಿಕೊಂಡಿಲ್ಲ. ದೇಶ, ಧರ್ಮದ ಹೆಸರಿನಲ್ಲಿ ಮತ ಪಡೆದು ಜನರ ಕಣ್ಣಿಗೆ ಮಂಕುಬೂದಿ ಎರಚುವ ಮೂಲಕ ಅಧಿಕಾರ ನಡೆಸುತ್ತಿರುವುದು ರಾಜ್ಯದ ಜನರಿಗೆ ತಿಳಿದಿದೆ ಎಂದರು.
ಬಿಜೆಪಿ ಪಕ್ಷ ಒಳಗೆಲ್ಲ ಹುಳುಕು ತುಂಬಿಕೊಂಡಿರುವ ಹಣ್ಣಾಗಿದೆ. ಆದರೆ ಹೊರಗೆ ನೋಡಲು ಮಾತ್ರ ಚಂದವಾಗಿ ಕಾಣುತ್ತಿದೆ ಇದರಿಂದ ಯಾವುದಕ್ಕೂ ಉಪಯೋಗಕ್ಕೆ ಬಾರದಾಗಿದೆ. ಚುನಾವಣೆ ಸಮಯ ಹತ್ತಿರವಾದಾಗ ಮಾತ್ರ ದೇವರು, ಹುತಾತ್ಮರು, ಸ್ವಾತಂತ್ರ್ಯ ಹೋರಾಟಗಾರರು ನಿಮ್ಮ ಪಕ್ಷಕ್ಕೆ ನೆನಪಾಗುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಡಿಮ್ಯಾಂಡ್ಗಾಗಿ ಹೀಗೆಲ್ಲ ಮಾಡುತ್ತಿದೆ ಎಂದು ಹೇಳಿದ್ದೀರಾ ನಮ್ಮ ಪಕ್ಷ ಸ್ವಾತಂತ್ರ್ಯ ಪೂರ್ವದಿಂದ ಬಂದಂತಹದ್ದು. ನೀವು ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸಂವಿಧಾನಕ್ಕೆ ಮತ್ತು ತಮ್ಮ ಸಚಿವ ಸ್ಥಾನಕ್ಕಾದರೂ ಗೌರವ ಕೊಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಇಲ್ಲದಿದ್ದರೆ ಜನರೇ ನಿಮಗೆ ಪಾಠಕಲಿಸುವ ಕಾಲ ದೂರವಿಲ್ಲ ಎಂದು ತಿಳಿಸಿದರು.
