ತೋಟದಲ್ಲೇ ಪ್ರತಿಭಟನೆಗೆ ಕೂತ ಅನ್ನದಾತರು: ದೇವರು ಕೊಟ್ರು ಪೂಜಾರಿ ಕೊಡ್ತಿಲ್ಲ!

ಚಿಕ್ಕಮಗಳೂರು: ಅಧಿಕಾರಿಗಳು ತೋಟಕ್ಕೆ ಬಂದು ಜಾಗ ಸರ್ಕಾರಕ್ಕೆ ಬಿಡಿ ಎಂದರು. ನಾವು ಶ್ರೀಗಂಧ ಬೆಳೆದಿದ್ದೀವಿ, ಬದುಕೇ ಇಲ್ಲಿ ಕಟ್ಟಿಕೊಂಡಿದ್ದೀವಿ ಹೇಗೆ ಬಿಡೋದು ಅಂತಾ ರೈತರು ಕೇಳಿದ್ರು. ಅಯ್ಯೋ, ಡೋಂಟ್ ವರಿ ಒಳ್ಳೇ ಪರಿಹಾರ ಕೊಡ್ತೀವಿ ಜಾಗ ಬಿಡ್ಬೇಕು ನೋ ದೂಸ್ರಾ ಮಾತು ಅಂತಾ ಆ ಕಡೆಯಿಂದ ರಿಪ್ಲೈ ಬಂತು. ಸರಿ, ಜಾಗ ಬಿಡ್ತೀವಿ ಅಂತಾ ರೈತರು ರೆಡಿಯಾದ್ರು. ಆದರೆ ಇದೀಗ ಕೋರ್ಟ್ ಆದೇಶ ಇದ್ರೂ ಪರಿಹಾರ ನೀಡದೇ ಇರುವ ಅಧಿಕಾರಿಗಳು ಕ್ರಮ ಖಂಡಿಸಿ ರೈತರು ಕುಟುಂಬದೊಂದಿಗೆ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ರೈತರಿಗೆ, ತಾವು ಬೆಳೆದ ಶ್ರೀಗಂಧದ ಮರಗಳ ಬಳಿಯೇ ಕುಳಿತುಕೊಂಡು ಸರ್ಕಾರ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವ ಸ್ಥಿತಿ ಬಂದಿದೆ. ಕೋರ್ಟ್ನ ಪರಿಹಾರದ ಆದೇಶ ಇಟ್ಕೊಂಡ್ ತೋರಿಸೋ ಜರೂರತ್ತು ಎದುರಾಗಿದೆ. ದೇವ್ರು ಕೊಟ್ರೂ ಪೂಜಾರಿ ಕೊಡ್ತಿಲಲ್ವಾ ಅನ್ನೋ ಆತಂಕ ಶುರುವಾಗಿದೆ.
ಹೌದು, ಅಂದ ಹಾಗೆ ಹೀಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದವರು. ಈ ಗ್ರಾಮದ 22 ಮಂದಿ ರೈತರು 8 ವರ್ಷದಿಂದ ಇಲ್ಲಿ ಭೂಮಿ ತೆಗೆದುಕೊಂಡು ಶ್ರೀಗಂಧ ಬೆಳೆದಿದ್ರು. ಆದ್ರೆ ಇದೀಗ ತರೀಕೆರೆ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯನ್ನ ನಿರ್ಮಿಸಲು ಇವುಗಳಿಗೆ ಕೊಡಲಿ ಪೆಟ್ಟು ಬೀಳೋ ಸಮಯ ಸನ್ನಿಹಿತವಾಗಿದೆ. ಆರು ವರ್ಷದ ಹಿಂದೆಯೇ ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೋಟಿಫಿಕೇಶನ್ ಮಾಡಿದ್ದಾರೆ. ಈ ವೇಳೆ ಕೇವಲ ಭೂಮಿಗೆ ಮಾತ್ರ ಅತಿ ಕಡಿಮೆ ಬೆಲೆ ಕಟ್ಟಿ ಪರಿಹಾರ ನೀಡಿದ್ದಾರೆ. ಆದ್ರೆ ಅದೇ ಭೂಮಿಯಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಪರಿಹಾರದ ಹಣ ನೀಡಲು ಪ್ರಾಧಿಕಾರ ಮೀನಾಮೇಷ ಎಣಿಸುತ್ತಿದ್ದು, ಶ್ರೀ ಗಂಧ ಬೆಳೆಯನ್ನು ಬೆಳೆದಿರುವ ರೈತ ವಿಶುಕುಮಾರ್ ಸರ್ಕಾರದ, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೊದಲು ಶ್ರೀಗಂಧದ ಬೆಳೆಗೆ ಬೆಲೆ ಫಿಕ್ಸ್ ಮಾಡಲು ಹಾವು ಏಣಿ ಆಟವನ್ನ ಪ್ರಾಧಿಕಾರ ಮಾಡ್ತು. ಸರ್ಕಾರಿ, ಖಾಸಗಿ ಎಜೆನ್ಸಿ ಅಂತಾ ವರ್ಷಗಟ್ಟಲ್ಲೇ ಸಮಯ ದೂಡುತ್ತಲ್ಲೇ ಬಂತು. ಕೊನೆಗೆ ಶ್ರೀಗಂಧ ಮರದ 30 ವರ್ಷದ ಜೀವಿತಾವಧಿಯನ್ನ ಗಮನದಲ್ಲಿಟ್ಟುಕೊಂಡು ಒಂದು ಮರಕ್ಕೆ 2 ಲಕ್ಷದ 44 ಸಾವಿರ ರೂಪಾಯಿಯನ್ನ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಆದರೂ ಅರಣ್ಯ ಇಲಾಖೆ ದಿನಕ್ಕೊಂದು ವರದಿ ತಯಾರಿಸುತ್ತಾ ಶ್ರೀಗಂಧ ಬೆಳೆದ ರೈತರಿಗೆ ಯಾಮಾರಿಸುತ್ತಲೇ ಬರುತ್ತಿದೆ. ಹತ್ತು ವರ್ಷದ ಒಂದು ಮರಕ್ಕೆ ಕೇವಲ 1176ರೂಪಾಯಿ ನೀಡುವುದಾಗಿ ಹೇಳಿದೆ. ಎಲ್ಲಿಯ 2 ಲಕ್ಷ, ಎಲ್ಲಿಯ 1 ಸಾವಿರ..? ಇವ್ರು ಕೊಡುವ ಪರಿಹಾರ ವಿಷವನ್ನ ಖರೀದಿ ಮಾಡಲು ಕೂಡ ಸಾಕಾಗುವುದಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ಆದೇಶ ಮಾಡಿದ್ರೂ ರೈತರನ್ನ ಸತಾಯಿಸುತ್ತಿರೋ ಅಧಿಕಾರಿಗಳ ನಡೆ ಪ್ರಶ್ನಿಸಿ ರೈತರು ಕುಟುಂಬ ಸದಸ್ಯರೊಂದಿಗೆ ಕಳೆದ 22 ದಿನಗಳಿಂದ ತರೀಕರೆ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಒಟ್ಟಾರೆ ದೇವರು ಕೊಟ್ರೂ ಪೂಜಾರಿ ಕೊಡದ ಪರಿಸ್ಥಿತಿ ಈ ರೈತರದ್ದಾಗಿದ್ದು ಇದರಿಂದ ನ್ಯಾಯಾಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೂ ರೈತರ ಸಮಸ್ಯೆ ಕೇಳಲು ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾಗದಿರುವುದು ಇರುವುದು ವಿಷರ್ಯಾಸವೇ ಸರಿ.
