ಬಿಡಿಎ ಬ್ರೋಕರ್ಗಳ ಮೇಲೆ ಎಸಿಬಿ ಮುಗಿಬಿದ್ದಿದ್ದು ಯಾಕೆ ಮತ್ತು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್!

ಬೆಂಗಳೂರು: ಅಬ್ಬಾ..ಇದೊಂದು ಭರ್ಜರಿ ಬೇಟೆ. ಪಕ್ಕಾ ಪ್ಲಾನ್ ಮಾಡಿಕೊಂಡೇ ಎಸಿಬಿ ಅಧಿಕಾರಿಗಳು ರೇಡು ಬಿದ್ದಿದ್ದಾರೆ. ಅವು ಸಣ್ಣ ಮಿಕಗಳಲ್ಲ. ಇಡೀ ಬೆಂಗಳೂರಿನಲ್ಲೇ ಕಮೀಷನ್ ಬೇಸಿಸ್ ಮೇಲೆ ತಮ್ಮ ಜಾಲವನ್ನ ಹರಡಿಕೊಂಡಿದ್ದ ಕಿರಾತಕರ ಗ್ಯಾಂಗದು. ಸರಿಯಾದ ಪಟ್ಟಿ ಇಟ್ಕೊಂಡು ಅಗತ್ಯ ದಾಖಲೆಗಳನ್ನ ಕಲೆ ಹಾಕ್ಕೊಂಡೇ ಬಿಡಿಎ ಬ್ರೋಕರ್ ಗಳ ಮೇಲೆ ರೇಡು ಬಿದ್ದಿತ್ತು ಎಸಿಬಿ ಟೀಮ್.
ಇವತ್ತು ಬೆಂಗಳೂರಿನ ಬಿಡಿಎಯಲ್ಲಿ ನಡೆಯುತ್ತಿರುವ ಅಕ್ರಮ ಬಹುಶಃ ಮತ್ತಿನ್ಯಾವ ಇಲಾಖೆಯಲ್ಲೂ ಅಷ್ಟರ ಮಟ್ಟಿಗೆ ಇಲ್ಲವೇನೋ? ಅಷ್ಟರ ಮಟ್ಟಿಗೆ ಬಿಡಿಎ ಕೂಳಬಾಕರ ಸಂತೆಯಾಗಿತ್ತು. ಇದನ್ನ ಮನಗಂಡೇ ಇತ್ತೀಚೆಗಷ್ಟೆ ಎಸಿಬಿ ರಾಜ್ಯಾಧ್ಯಂತ ಇರೋ ಭ್ರಷ್ಟರ ಮನೆಗಳ ಮೇಲೆ ಮುಗಿಬಿದ್ದಿತ್ತಲ್ಲ, ಆಗ ಬಿಡಿಎ ಕೆಲ ಅಧಿಕಾರಿಗಳ ಮನೆ ಮೇಲೂ ದಾಳಿ ಮಾಡಿತ್ತು. ಈ ದಾಳಿ ಮತ್ತು ಈ ಹಿಂದೆ ನಡೆಸಿದ ದಾಳಿಗಳಲ್ಲಿ, ದೊರೆತ ದಾಖಲೆ ಪತ್ರಗಳನ್ನ ಬಿಚ್ಚಿ ನೋಡಿದ ಎಸಿಬಿ ಅಧಿಕಾರಿಗಳಿಗೆ ಕೇವಲ ಅಧಿಕಾರಿಗಳು ಮಾತ್ರವಲ್ಲ, ಇವರನ್ನ ಬಳಸಿಕೊಂಡು ಕೆಲ ಬ್ರೋಕರ್ ಗಳು ದುಂಡಗಾಗಿದ್ದಾರೆ ಅನ್ನೋದು ಗೊತ್ತಾಯ್ತು. ಆಗಲೇ ಮತ್ತೊಂದು ರೇಡ್ ಗೆ ಸಿದ್ದವಾಗಿತ್ತು ಎಸಿಬಿ ಟೀಮ್

ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ದಾಳಿ ಮಾಡೋಕೆ ನಿರ್ಧರಿಸಿತು. ಅದ್ರಂತೆ ಖಡಕ್ ತಂಡಗಳು ರಚನೆಯಾದವು. ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು, 9 ಕಡೆ ದಾಳಿಗೆ ನಕ್ಷೆ ಸಿದ್ದಪಡಿಸಿಕೊಳ್ತು.
ಅದ್ರಂತೆ ಮೊದಲ ಸುತ್ತಿನಲ್ಲಿ ಬಿಡಿಎ ವ್ಯವಹಾರ ಮಾಡ್ಕೊಂಡು ಭರ್ಜರಿ ಕಾಸು ಮಾಡಿರುವ ಚಾಮರಾಜಪೇಟೆಯ ಬಿ.ಎನ್.ರಘು, R.T.ನಗರ ಬಳಿಯ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಆರ್.ಆರ್.ನಗರದ ತೇಜು, ಮಲ್ಲತ್ತಹಳ್ಳಿಯ ರತ್ನವೇಲು, ಮುದ್ದಿನಪಾಳ್ಯದ ಅಶ್ವತ್ಥ್ ಹಾಗೂ ಚಿಕ್ಕಹನುಮಯ್ಯ, ಚಾಮುಂಡೇಶ್ವರಿನಗರದ ರಾಮು ಮತ್ತು, ಲಕ್ಷ್ಮಣ ಎಂಬುವವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ಮುಗಿಬಿದ್ದರು.

ಇಂತಹದ್ದೊಂದು ರೇಡಿಗೂ ಕಾರಣವಿತ್ತು. ಪ್ರಮುಖವಾಗಿ ಕೆಂಪೇಗೌಡ ಲೇಔಟ್ ನಲ್ಲಿ ಒಂದು ಬದಲಿ ನಿವೇಶನ ಹಂಚಿಕೆ ದೂರು ಬಿಡಿಎಗೆ ಬಂದಿತ್ತು. ಅಲ್ಲದೆ ಈ ಹಿಂದೆ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದಾಗ ಸಿಕ್ಕ ದಾಖಲೆಗಳು ಕೂಡ ಈ ಬ್ರೋಕರ್ ಗಳು ಮಾಡಿರುವ ಅಪರಾತಪಾರಗಳು ಕಂಡು ಬಂದಿದ್ವು. ಅಲ್ಲದೇ ರೈತರಿಗೆ ಸಿಗಬೇಕಿದ್ದ ಜಮೀನಿಗೆ ಬೇಲಿ ಸುತ್ತಿದ್ದು ಗೋಚರವಾಗಿತ್ತು. ಗೋಮಾಳ ಜಾಗಕ್ಕೆ ರೈತರ ಹೆಸರಲ್ಲಿ ಬೇಲಿ ಸುತ್ತಲಾಗಿತ್ತು.
ಬೆಳಗಿನ ಜಾವ ಐದು ಗಂಟೆಗೆ ಎಸಿಬಿ ಅಧಿಕಾರಿಗಳು ಬ್ರೋಕರ್ ಗಳ ಭವ್ಯ ಬಂಗಲೆಗಳ ಮುಂದೆ ನಿಂತು ಕಾಲಿಂಗ್ ಬೆಲ್ ಒತ್ತ ತೊಡಗಿದ್ರು. ಜ್ಞಾನಭಾರತಿ ಸಮೀಪವಿರುವ ಚಿಕ್ಕ ಹನುಮಯ್ಯನ ಮನೆ, ಆರ್ ಟಿ ನಗರದಲ್ಲಿರುವ ಬ್ರೋಕರ್ ಮೋಹನ್ ಮನೆ, ರಾಜರಾಜೇಶ್ವರಿನಗರದಲ್ಲಿರುವ ತೇಜು ಅಲಿಯಾಸ್ ತೇಜಸ್ವಿ ಎಂಬಾತನ ಮನೆ, ಚಾಮುಂಡೇಶ್ವರಿ ನಗರದ ರಾಮ ಲಕ್ಷಣ ಸಹೋದರರ ಮನೆ..ಹೀಗೆ ಅನಾಮತ್ತು 100ಕ್ಕು ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.

ಒಬ್ಬೊಬ್ಬ ಬ್ರೋಕರ್ ಮನೆ ಭವ್ಯ ಬಂಗಲೆಗಳು. ಒಳಗೆ ಕಾಲಿಟ್ಟ ಅಧಿಕಾರಿಗಳು ಬೆಚ್ಚಿಬಿದ್ದಿದ್ರು. ಒಂದಲ್ಲ ಎರಡಲ್ಲ, ಮೂರ್ನಾಲ್ಕು ಹೈಫೈ ಕಾರುಗಳು, ಅವುಗಳ ಬೆಲೆಯೇ ಕೋಟಿ ಕೋಟಿ. ಇನ್ನು ಚಿನ್ನ ಬೆಳ್ಳಿ, ವಜ್ರದ ಬೆಲೆ ಹೇಳೋಕೆ ಅಸಾಧ್ಯ. ಇನ್ನು ಕೂಲಿಂಗ್ ಗ್ಲಾಸುಗಳು, ಬೆಲೆ ಬಾಳುವ ಕೈಗಡಿಯಾರಗಳು ಲೆಕ್ಕಕ್ಕೆ ಇಲ್ಲ. ಇದೀಗ ಎಲ್ಲರ ಮನೆ ಮೇಲೂ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
