ಕನಕಪುರದಲ್ಲಿ ಆನೆ ದಾಳಿ; ಲಕ್ಷಾಂತರ ರೂ. ಬೆಳೆ ನಷ್ಟ

ರಾಮನಗರ: ಕನಕಪುರ ತಾಲೂಕಿನ ಕೋಡಿಹಳ್ಳಿ ಸಮೀಪದ ಗರಳಾಪುರ ಗ್ರಾಮದ ಅರಣ್ಯ ಇಲಾಖೆಯ ಪ್ಲಾಂಟೇಷನ್ ಬಳಿ ರೈತರ ಬೆಳೆ ಕಾಡಾನೆಗಳ ಪಾಲಾಗಿ ಲಕ್ಷಾಂತರ ರೂ. ನಷ್ಟಪಡಿಸಿ ರೈತರನ್ನು ಆತಂಕಕ್ಕೀಡುಮಾಡಿದೆ ಎಂದು ಆ ಭಾಗದ ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ.
ಗರಳಾಪುರ ಪ್ಲಾಂಟೇಷನ್ ಕಡೆಯಿಂದ ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಗ್ರಾಮದ ಸರ್ವೆನಂ. ೫೫ ರ ಕರಿಗೌಡ, ಸರ್ವೆನಂ. ೫೪ರ ರಮಾದೇವಿಯವರ ತಲಾ ಒಂದು ಎಕರೆ ಬಾಳೆತೋಟವನ್ನು ನಾಶಮಾಡಿ ಪಕ್ಕದ ಸರ್ವೆನಂ. ೯/೨ ರ ಜಿ.ಹೆಚ್.ಪ್ರಕಾಶ್ರ ಜಮೀನಿನ ಸುತ್ತಲ ತಂತಿಬೇಲಿಯನ್ನು ಮುರಿದು ಹಾಕಿ ಹೋಗಿವೆ. ಹಿಂದಿನ ದಿನದ ರಾತ್ರಿ ಅರಣ್ಯ ಇಲಾಖೆ ಸಿಬ್ಬಂಧಿಗಳು ಗರಳಾಪುರ ಎಸ್ಟೇಟ್ ಬಳಿಯಿದ್ದ ಕಾಡಾನೆಗಳನ್ನು ಪಟಾಕಿ ಸಿಡಿಸಿ ಓಡಿಸಿದ್ದಾರೆ. ಅಲ್ಲಿಂದ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ಲಗ್ಗೆಯಿಟ್ಟು ರೈತರು ಬೆಳೆದ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ. ಇದರಿಂದ ರೈತರ ನಿತ್ಯ ಜೀವನ ದುಸ್ತರವಾಗಿದೆ.
ರಾತ್ರಿಯೇ ಗ್ರಾಮದ ಮುಖಂಡರ ಮೂಲಕ ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದರೂ ಇದುವರೆಗೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿನೀಡಿ ಪರಶೀಲನೆ ನಡೆಸಿಲ್ಲ ಎಂದು ದೂರಿದ್ದಾರೆ.
ಪರಿಹಾರವಿಲ್ಲ : ಈ ರೈತರ ಜಮೀನಿನಲ್ಲಿ ಕಳೆದ ಆರು ತಿಂಗಳ ಹಿಂದೆ ಫಸಲುಗಳನ್ನು ನಾಶಮಾಡಿ ಹೋಗಿದ್ದ ಕಾಡಾನೆಗಳ ಧಾಳಿಯ ಬಗ್ಗೆ ಎಲ್ಲಾ ದಾಖಲೆಗಳನ್ನು ನೀಡಿದ್ದರೂ ಇದುವರೆಗೂ ರೈತರಿಗೆ ಬಿಡಿಗಾಸು ಪರಿಹಾರವೂ ದೊರೆತಿಲ್ಲ ಎಂದು ರೈತರು ಆರೋಪಿಸಿದರು. ಕೂಡಲೇ ಕಾಡಾನೆಗಳ ಹಾವಳಿಯನ್ನು ತಪ್ಪಿಸಿ ಬಾಕಿ ಉಳಿದಿರುವ ರೈತರ ಪರಿಹಾರವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
