Breaking NewsLatestರಾಜಕೀಯರಾಜ್ಯರಾಷ್ಟ್ರೀಯ

ಪ್ರಾದೇಶಿಕ ಪಕ್ಷಗಳಿಗೆ ದೇಣಿಗೆಯಲ್ಲಿ ಶೇ.55ಕ್ಕೂ ಹೆಚ್ಚು ಅಜ್ಞಾತ ಮೂಲದ್ದು; ಎಡಿಆರ್ ವರದಿಯ ಪಟ್ಟಿಯಲ್ಲಿದೆ ಜೆಡಿಎಸ್

ನವದೆಹಲಿ: ಪ್ರಾದೇಶಿಕ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಹರಿದುಬರುವ ಹಣದಲ್ಲಿ ಶೇ.55ಕ್ಕೂ ಹೆಚ್ಚಿನದು ಅಜ್ಞಾತ ಮೂಲಗಳಿಂದಲೇ ಅದರಲ್ಲೂ ಹೆಚ್ಚಿನ ಮೊತ್ತ ಎಲೆಕ್ಟೋರಲ್ ಬಾಂಡ್​ಗಳಿಂದಲೇ ಬಂದಿದೆಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿರುವುದಾಗಿ ತಿಳಿದುಬಂದಿದೆ.

2019-20ರ ಆರ್ಥಿಕ ವರ್ಷದಲ್ಲಿ 25 ಪ್ರಾದೇಶಿಕ ಪಕ್ಷಗಳಿಗೆ ಬಂದಿರುವ ದೇಣಿಗೆಯನ್ನು ಗಮನಕ್ಕೆ ತೆಗೆದುಕೊಂಡು ಎಡಿಆರ್ ಈ ವರದಿ ಸಿದ್ಧಪಡಿಸಿದೆ ಎನ್ನಲಾಗಿದೆ. ದೇಣಿಗೆ ರೂಪದಲ್ಲಿ ಬಂದ ಹಣದಲ್ಲಿ ಶೇ.95ರಷ್ಟು ಎಲೆಕ್ಟೋರಲ್ ಬಾಂಡ್​ಗಳ ಲೆಕ್ಕದಲ್ಲಿದ್ದು, ಅಷ್ಟೂ ಹಣವೂ ಅಜ್ಞಾತ ಮೂಲದ್ದಾಗಿದೆ ಎಂದು ವರದಿ ಹೇಳಿದೆ.

2019-20ರ ಹಣಕಾಸು ವರ್ಷದಲ್ಲಿ 25 ಪ್ರಾದೇಶಿಕ ಪಕ್ಷಗಳು ಸ್ವೀಕರಿಸಿದ ಒಟ್ಟು ದೇಣಿಗೆ 803.24 ಕೋಟಿ ರೂ.ಗೆ ಹೆಚ್ಚು. ಇದರಲ್ಲಿ 445.7 ಕೋಟಿ ರೂ. ಅಜ್ಞಾತ ಮೂಲಗಳಿಂದಲೇ ಬಂದಿದ್ದಾಗಿದೆ ಎಂದು ವರದಿ ತಿಳಿಸಿದೆ. ಅಜ್ಞಾತ ಮೂಲಗಳಿಂದ ಬಂದ ದೇಣಿಗೆಗಳಲ್ಲಿ, ರೂ 426.233 ಕೋಟಿ (95.616%) ಚುನಾವಣಾ ಬಾಂಡ್‌ಗಳಿಂದ ಬಂದಿದ್ದರೆ, ಇನ್ನುಳಿದ ರೂ 4.976 ಕೋಟಿ ಸ್ವಯಂಪ್ರೇರಿತವಾಗಿ ಕೊಟ್ಟಿದ್ದಾಗಿದೆ.

ಇದೇ ವೇಳೆ, ರಾಷ್ಟ್ರೀಯ ಪಕ್ಷಗಳು ಅಜ್ಞಾತ ಮೂಲಗಳಿಂದ ಪಡೆದ ದೇಣಿಗೆ ಆ ಪಕ್ಷಗಳ ಆದಾಯದ ಶೇ.70.98ರಷ್ಟು ಎಂದು ವರದಿಯು ಉಲ್ಲೇಖಿಸಿದೆ.

ಕುತೂಹಲಕಾರಿ ಸಂಗತಿಯೆಂದರೆ, ದಕ್ಷಿಣ ಭಾರತದ ಪಕ್ಷಗಳಾದ ಟಿಆರ್​ಎಸ್, ಟಿಡಿಪಿ, ವೈಎಸ್ಆರ್ ಕಾಂಗ್ರೆಸ್ ಪಕ್ಷ, ಡಿಎಂಕೆ ಮತ್ತು ಜೆಡಿಎಸ್ ಅಜ್ಞಾತ ಮೂಲಗಳಿಂದ ಅತಿ ಹೆಚ್ಚು ಆದಾಯ ಹೊಂದಿರುವ ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಒಡಿಶಾದ ಆಡಳಿತಾರೂಢ ಬಿಜೆಡಿ ಕೂಡ ಸೇರಿದೆ. ಅತಿ ಹೆಚ್ಚು ಅಜ್ಞಾತ ದೇಣಿಗೆಗಳನ್ನು ಘೋಷಿಸಿದ ಕೆಲವು ಪ್ರಮುಖ ಪ್ರಾದೇಶಿಕ ಪಕ್ಷಗಳೆಂದರೆ: ಟಿಆರ್​ಎಸ್ (ರೂ. 89.158 ಕೋಟಿ), ಟಿಡಿಪಿ (ರೂ. 81.694 ಕೋಟಿ), ವೈಎಸ್ಆರ್ ಕಾಂಗ್ರೆಸ್ ಪಕ್ಷ (ರೂ. 74.75 ಕೋಟಿ), ಬಿಜೆಡಿ (ರೂ. 50.586 ಕೋಟಿ) ಮತ್ತು ಡಿಎಂಕೆ (ರೂ. 45.50 ಕೋಟಿ).

ಗೊತ್ತಿರುವ ದಾನಿಗಳಿಂದ (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕೊಡುಗೆ ವರದಿಯಿಂದ ಲಭ್ಯವಿರುವ ದಾನಿಗಳ ವಿವರಗಳ ಆಧಾರದಲ್ಲಿ) ಪ್ರಾದೇಶಿಕ ಪಕ್ಷಗಳು ಸ್ವೀಕರಿಸಿದ ದೇಣಿಗೆಗಳು 184.623 ಕೋಟಿ. ಇದು ಆ ಪಕ್ಷಗಳ ಒಟ್ಟು ಆದಾಯದ ಶೇ.22.98 ಆಗಿದೆ. ಇದಲ್ಲದೆ, ಸದಸ್ಯತ್ವ ಶುಲ್ಕಗಳು, ಬ್ಯಾಂಕ್ ಬಡ್ಡಿ, ಪ್ರಕಟಣೆಗಳ ಮಾರಾಟ, ಪಾರ್ಟಿ ಲೆವಿ ಮುಂತಾದ ಇತರ ತಿಳಿದಿರುವ ಮೂಲಗಳಿಂದ ಅವು ಇನ್ನೂ 172.843 ಕೋಟಿ (ಒಟ್ಟು ಆದಾಯದ 21.52%) ಪಡೆದಿವೆ.

2018-19ರ ಹಣಕಾಸು ವರ್ಷದ ತನ್ನ ವರದಿಯಲ್ಲಿ ಎಡಿಆರ್, 23 ಪ್ರಾದೇಶಿಕ ಪಕ್ಷಗಳು ಸಲ್ಲಿಸಿದ್ದ ವಾರ್ಷಿಕ ಲೆಕ್ಕಪರಿಶೋಧನೆ ಮತ್ತು ದೇಣಿಗೆ ವರದಿಗಳನ್ನು ವಿಶ್ಲೇಷಿಸಿದ್ದು, ಪಕ್ಷಗಳ ಒಟ್ಟು ಆದಾಯವು 885.956 ಕೋಟಿ ರೂ.ಗಳಿಗೂ ಹೆಚ್ಚು ಹಾಗೂ ಅದರಲ್ಲಿ ರೂ 481.276 ಕೋಟಿ (54.32%) ಅಜ್ಞಾತ ಮೂಲದಿಂದ ಬಂದಿದೆ ಎಂದು ಹೇಳಿದೆ.

ರಾಜಕೀಯ ಪಕ್ಷಗಳ ಆದಾಯದ ಹೆಚ್ಚಿನ ಶೇಕಡಾವಾರು ಪಾಲಿನ ಮೂಲವನ್ನು ಪತ್ತೆಹಚ್ಚಲು ಸಾಧ್ಯವಿಲ್ಲದ ಕಾರಣ, ಎಲ್ಲಾ ದಾನಿಗಳ ಸಂಪೂರ್ಣ ವಿವರಗಳನ್ನು ಆರ್‌ಟಿಐ ಅಡಿಯಲ್ಲಿ ಸಾರ್ವಜನಿಕ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಬೇಕು ಎಂದು ಎಡಿಆರ್ ಅಪೇಕ್ಷಿಸಿದೆ. ವಿದೇಶಿ ನಿಧಿಯನ್ನು ಪಡೆಯುವ ಯಾವುದೇ ಸಂಘಟನೆಯು ಯಾವುದೇ ಅಭ್ಯರ್ಥಿ ಅಥವಾ ಪಕ್ಷವನ್ನು ಬೆಂಬಲಿಸಲು ಅಥವಾ ಪ್ರಚಾರ ಮಾಡಲು ಅನುಮತಿ ನೀಡಬಾರದು ಎಂದು ಅದು ಆಗ್ರಹಿಸಿದೆ. ಎಲ್ಲಾ ದೇಣಿಗೆಗಳ ಪಾವತಿ ವಿಧಾನ (ರೂ. 20,000 ಮೇಲ್ಪಟ್ಟು ಮತ್ತು ಅದಕ್ಕಿಂತ ಕಡಿಮೆ), ಕೂಪನ್‌ಗಳ ಮಾರಾಟದಿಂದ ಬರುವ ಆದಾಯ, ಸದಸ್ಯತ್ವ ಶುಲ್ಕಗಳು ಇತ್ಯಾದಿಗಳನ್ನು ಪಕ್ಷಗಳು ಐಟಿ ಇಲಾಖೆ ಮತ್ತು ಇಸಿಐಗೆ ಸಲ್ಲಿಸಲಾಗುವ ಲೆಕ್ಕಪರಿಶೋಧನಾ ವರದಿಗಳಲ್ಲಿ ಘೋಷಿಸಬೇಕು ಎಂದೂ ಎಡಿಆರ್ ಹೇಳಿದೆ.

Spread the love

Related Articles

Leave a Reply

Your email address will not be published. Required fields are marked *

Back to top button