ಕಾಂಗ್ರೆಸ್ ಸೋಲಿಸುವ ಕಾರ್ಯತಂತ್ರ ಕೈಬಿಟ್ಟ ಹೆಚ್ಡಿಕೆ: ಸಿಂದಗಿಯಲ್ಲಿ ಪಕ್ಷ ಹೀನಾಯ ಸೋಲು ಇದಕ್ಕೆ ಕಾರಣ

ರಾಜೇಶ್ ಕೊಂಡಾಪುರ
ರಾಮನಗರ: ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಏಕೈಕ ಉದ್ದೇಶದ ಕಾರ್ಯತಂತ್ರವನ್ನು ಕೈ ಬಿಡಲು ಜೆಡಿಎಸ್ ನಿರ್ಧರಿಸಿದೆ. ಸೋಮವಾರ ಆರಂಭವಾದ ಜನತಾ ಸಂಗಮ ಕಾರ್ಯಾಗಾರದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ನಾಯಕರಿಗೆ ಇದರ ಸುಳಿವು ನೀಡಿದ್ದಾರೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅನುಭವದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವಿವರ ನೀಡಿವೆ. ಮುಸ್ಲಿಂ ಮತದಾರರ ಮನಃಸ್ಥಿತಿ ಅರಿಯುವ ಉದ್ದೇಶದಿಂದ ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾತು, ಆದರೆ ಮುಸ್ಲೀಮರು ನಿರೀಕ್ಷಿತ ಪ್ರಮಾಣದಲ್ಲಿ ಜೆಡಿಎಸ್ ಬೆಂಬಲಕ್ಕೆ ನಿಲ್ಲಲಿಲ್ಲ.
ಅವರು ಬೆಂಬಲ ನೀಡಿದ್ದರೆ ಮುಂದಿನ ಚುನಾವಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಆ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು, ಅದೇ ರೀತಿ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡುವುದೂ ನನ್ನ ಉದ್ದೇಶವಾಗಿತ್ತು. ಆದರೆ ಬಿಜೆಪಿ ವಿರುದ್ಧ ಹೋರಾಡಲು ನಾವು ಮಾತ್ರ ಸಮರ್ಥರು ಎಂಬ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮುಸ್ಲೀಮರು ನಂಬಿದ್ದಾರೆ, ಇದೇ ಕಾರಣಕ್ಕಾಗಿ ಸಿಂಧಗಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಿರೀಕ್ಷಿತ ಪ್ರಮಾಣದ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.
ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆಲೆದೆ, ಆದರೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಏಕೈಕ ಕಾರಣಕ್ಕಾಗಿ ಪಕ್ಷದ ಮೂಲ ಮತಬ್ಯಾಂಕ್ ಚೆದುರಿ ಹೋತು, ಇದರಿಂದ ಕಾಂಗ್ರೆಸ್ ಪಕ್ಷ ಸೋತಿದ್ದೇನೋ ಸರಿ. ಆದರೆ ಇದರ ಲಾಭವನ್ನು ಆಡಳಿತಾರೂಢ ಬಿಜೆಪಿ ಪಡೆದು, ನಾವು ಹಿನಾಯ ಸೋಲು ಕಾಣಬೇಕಾಯಿತು ಎಂದು ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರೆದುರು ನೋವು ತೋಡಿಕೊಂಡಿದ್ದಾರೆ.ಈ ಅನುಭವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಅಜೆಂಡಾವನ್ನು ಬದಿಗಿಟ್ಟು, ಗೆಲುವನ್ನೇ ಮಾನದಂಡವಾಗಿಟ್ಟುಕೊಂಡು ಕಾರ್ಯತಂತ್ರ ರೂಪಿಸೋಣ ಎಂದು ಅವರು ಈ ನಾಯಕರೆದುರು ಹೇಳಿಕೊಂಡಿದ್ದಾರೆ ಎಂದುಮೂಲಗಳು ವಿವರಿಸಿವೆ.
ಈ ಮಧ್ಯೆ, ಜನತಾ ಸಂಗಮ ಕಾರ್ಯಾಗಾರದಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ನಾಯಕರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಣ್ಣ, ಸಣ್ಣ ಸಮಸ್ಯೆಗಳನ್ನೂ ನಿರ್ಲಕ್ಷಿಸದೆ ಪರಿಹಾರ ಸೂಚಿಸಲಾಗುತ್ತಿದೆ. ಒಂದು ಬಾರಿ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಿದರೆ, ಮುಂದಿನ ದಿನಗಳಲ್ಲಿ ಟಿಕೆಟ್ ಹಂಚಿಕೆಯಂತಹ ಕೆಲಸ ಮಾತ್ರವಲ್ಲದೆ ಹಲವು ಸಮಸ್ಯೆಗಳು ದೂರವಾಗುತ್ತವೆ ಎಂದು ಕುಮಾರಸ್ವಾಮಿ ಭಾವಿಸಿದ್ದು, ಅದರನ್ವಯ ಜನತಾ ಸಂಗಮ ಕಾರ್ಯಾಗಾರ ನಡೆಯುತ್ತಿದೆ.




