ಹು-ಧಾ ಮಾಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ; ಡಿಸಿಯೊಂದಿಗೆ ಚುನಾವಣಾ ಆಯುಕ್ತರ ಸಭೆ ನಿಗದಿ

ಧಾರವಾಡ : ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಅವಧಿ ಈಗಾಗಲೇ ಪೂರ್ಣಗೊಂಡಿದ್ದು, ಈಗ ಪಾಲಿಕೆಯ ಚುನಾವಣೆ ದಿನಾಂಕ ನಿಗದಿಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಪಾಲಿಕೆ ಚುನಾವಣೆಯ ಕುರಿತಂತೆ ಚರ್ಚೆ ನಡೆಸಲು ಈಗ ವೇದಿಕೆ ಸಿದ್ಧವಾಗಿದ್ದು, ಜುಲೈ 19 ರಂದು ಚುನಾವಣೆ ಆಯುಕ್ತರು, ಧಾರವಾಡ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಈ ಕುರಿತು ರಾಜ್ಯ ಚುನಾವಣೆ ಅಧೀನ ಕಾರ್ಯದರ್ಶಿಗಳು ಪತ್ರದ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಅಗತ್ಯ ಮಾಹಿತಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಲು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಧಾರವಾಡ ಜಿಲ್ಲಾಧಿಕಾರಿ ಜೊತೆ ಜೊತೆಗೆ ಈಗಾಗಾಲೇ ಪಾಲಿಕೆ,ಪುರಸಭೆ, ನಗರಸಭೆ ಅವಧಿ ಪೂರ್ಣಗೊಂಡ ಜಿಲ್ಲೆಯ ನಾಲ್ಕು ಜಿಲ್ಲಾಧಿಕಾರಿಗಳಿಗೂ ಸಭೆಗೆ ಹಾಜರಾಗಲು ತಿಳಿಸಲಾಗಿದೆ.
ಜುಲೈ 19 ಮಧ್ಯಾಹ್ನ 2 ಗಂಟೆಗೆ ರಾಜ್ಯ ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸ್ ಸಭೆ ನಿಗದಿ ಮಾಡಿದ್ದು, ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಚುನಾವಣೆಯ ಸಿದ್ಧತೆ ಕುರಿತು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆಯು ಚರ್ಚೆನಡೆಸಿ ಚುನಾವಣೆ ಆಯುಕ್ತರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ರಾಜ್ಯ ಚುನಾವಾಣೆ ಆಯೋಗವು ವಾರ್ಡ್ ವಾರ್ ಮತದಾರ ಪಟ್ಟಿ ಸಿದ್ಧ ಪಡೆಸಿಕೊಳ್ಳಲು ಈ ಹಿಂದೆ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಸೂಚಿಸಿತ್ತು. ಈಗ ಜುಲೈ 19 ರ ನಂತರ ಪಾಲಿಕೆಯ ಚುನಾವಣೆ ದಿನಾಂಕ ಹೊರಬಿಳಬಹುದು ಎಂದು ಹೇಳಲಾಗುತ್ತಿದೆ.
