25 ಕೋಟಿ ಸಾಲಕ್ಕೆ ಶೂರಿಟಿ ವಿಚಾರ; ವಂಚನೆ ಯತ್ನ ನಡೆದಿದೆ ಎಂದ ದರ್ಶನ್

ಮೈಸೂರು: 25 ಕೋಟಿ ರೂಪಾಯಿ ಬ್ಯಾಂಕ್ ಸಾಲ ಶೂರಿಟಿ ಸಂಬಂಧಿಸಿದಂತೆ ವಂಚಿಸಲು ಯತ್ನಿಸಿದ್ದಾರೆ ಎಂದು ನಟ ದರ್ಶನ್ ಸ್ಪಷ್ಟೀಕರಣ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ 16ರಂದು ನನಗೆ ಈ ಸಂಬಂಧ ಮೊದಲ ಕರೆ ಬಂದಿತು. ನನ್ನ ತೋಟದ ಮನೆ ಸೇರಿದಂತೆ ಹಲವು ಆಸ್ತಿಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಬ್ಯಾಂಕ್ ಅಧಿಕಾರಿ ಎಂದು ಹೇಳಿದ್ದ ವ್ಯಕ್ತಿಯೊಬ್ಬರು ತಿಳಿಸಿದರು ಎಂದು ದರ್ಶನ್ ಬಹಿರಂಗಪಡಿಸಿದರು.
ಅರುಣಾ ಕುಮಾರಿ ಎಂಬವರು ಈ ಸಂಬಂಧ ತಮ್ಮನ್ನು ನಂಬಿಸಲು ಪ್ರಯತ್ನಿಸಿದರು ಎಂದು ದರ್ಶನ್ ತಿಳಿಸಿದರು. ಜೂನ್ ತಿಂಗಳಿನಲ್ಲಿ ಉಮಾಪತಿಯವರ ಕರೆ ಬಂದು ಅವರು ಶೂರಿಟಿ ಹಾಕಿದ್ದೀರ ಎಂದು ಕೇಳಿದರು. ಕಾನ್ಫರೆನ್ಸ್ ಕಾಲ್ ನಲ್ಲಿ ಅರುಣಾ ಕುಮಾರಿ ಇದ್ದರು. ಆಗ ಅವರು 25 ಕೋಟಿ ಸಾಲಕ್ಕೆ ತಾವು ಶೂರಿಟಿ ಹಾಕಿರುವುದಾಗಿ ಅರುಣಾ ಕುಮಾರಿಯವರು ತಮ್ಮ ನಿವಾಸದಲ್ಲಿ ತಿಳಿಸಿದ್ದು, ತಮ್ಮ ಆಪ್ತರಾದ ಹರ್ಷ ಹೀಗೆ ಮಾಡಿರುವುದಾಗಿ ಹೇಳಿದರು. ನಂತರ ಹರ್ಷ ಹಾಗೂ ರಾಕಿಯವರ ಬಗ್ಗೆ ವಿಚಾರಿಸಿದ್ದು, ಅವರು ಯಾರೂ ಈ ಕೆಲಸ ಮಾಡಿಲ್ಲವೆಂದು ತಿಳಿಯಿತು ಎಂದರು.
ಅರುಣಾ ಕುಮಾರಿಯವರು ತಮ್ಮ ತೋಟದ ಬಗ್ಗೆ ಮಾತಾಡಿ ಅಲ್ಲಿಗೆ ಒಮ್ಮೆ ಹೋಗಬೇಕೆಂದು ಹೇಳಿ ತೋಟಕ್ಕೆ ಭೇಟಿ ನೀಡಿದರು. ತೋಟದಲ್ಲಿ ಹರ್ಷ ಅವರನ್ನು ನೋಡಿ ಅರುಣಾ ಕುಮಾರಿಯವರು ಶಾಕ್ ಆಗಿದ್ದು, ತೋಟದಿಂದ ಅರುಣಾಕುಮಾರಿಯವರು ಯಾರಿಗೋ ಕರೆ ಮಾಡಿದರು. ಅವರು ಗಾಬರಿಯಾಗಿದ್ದು ಕಂಡುಬಂತು. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಆ ಹೆಸರಿನವರು ತಮ್ಮ ಬ್ಯಾಂಕ್ ಉದ್ಯೋಗಿ ಅಲ್ಲ ಎಂಬುದು ತಿಳಿದುಬಂತು. ಅರುಣಾ ಕುಮಾರಿ ಸತ್ಯ ಹೇಳಲು ತಮ್ಮ ನಿವಾಸಕ್ಕೆ ಬಂದು, ಇದೆಲ್ಲ ಮಾಡಿಸಿದ್ದು ಉಮಾಪತಿ ಎಂದು ಹೇಳಿದ್ದರು ಎಂದರು.
ಇದರಲ್ಲಿ ಯಾರ ಕೈವಾಡ ಇದೆ ಎಂಬುದು ತಿಳಿದಿಲ್ಲ. ಅರುಣಾ ಕುಮಾರಿ, ಉಮಾಪತಿ, ಹರ್ಷ, ರಾಕಿ ಯಾರೇ ಆದರೂ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಆದರೆ ಇದರಲ್ಲಿ ಅರುಣಾ ಕುಮಾರಿ ಜೊತೆ ಉಮಾಪತಿ ಕೈ ಜೋಡಿಸಿದ್ದಾರಾ ಎಂಬುದು ಬಗೆಹರಿಯಬೇಕಾಗಿರುವ ವಿಷಯ ಎಂದು ಹೇಳಿದರು.
