ಕೋವಿಡ್ ಕರ್ಫ್ಯೂ ಹಣೆಬರಹ ಇಂದು ನಿರ್ಧಾರ: ಮಧ್ಯಾಹ್ನದ ಹೈವೊಲ್ಟೇಜ್ ಸಭೆಗೆ ಕ್ಷಣಗಣನೆ

ಬೆಂಗಳೂರು: ವಾರಂತ್ಯ ಮತ್ತು ರಾತ್ರಿ ಕರ್ಫ್ಯೂ ಹಣೆಬರಹ ಇಂದು ನಿರ್ಧಾರವಾಗಲಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆ ನಂತರ ಈ ಸಂಬಂಧ ಕೋವಿಡ್ ತಜ್ಱರು ಮತ್ತು ಸರ್ಕಾರದ ಉನ್ನತಮಟ್ಟದ ಹೈವೋಲ್ಟೇಜ್ ಸಭೆ ನಡೆಯಲಿದೆ. ಸಭೆಯಲ್ಲಿ ಜಾರಿಯಲ್ಲಿರುವ ಕೋವಿಡ್ ಕಠಿಣ ನಿಯಮಾವಳಿಗಳು ಹಾಗೂ ವಾರಂತ್ಯ ಮತ್ತು ರಾತ್ರಿ ಕರ್ಫ್ಯೂ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಸರ್ಕಾರ ಚರ್ಚೆ ನಡೆಸಲಿದೆ. ಕೇಂದ್ರದ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೇಸರಿಪಡೆಯ ಅನೇಕ ಮುಖಂಡರು ಈಗಾಗಲೇ ವೀಕೆಂಡ್ ಮತ್ತು ನೈಟ್ ಕರ್ಫ್ಯೂ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಲಹೆಗಾರರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ತಿಳಿಸಿದ್ದಾರೆ.
ಜತೆಗೆ ಪ್ರಸಕ್ತ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಪುನರ್ ಆರಂಭಿಸಬೇಕೆ ಅಥವಾ ಬೇಡವೇ ? ಎಂಬುದರ ಕುರಿತು ಸರ್ಕಾರ ಇಂದು ತೀರ್ಮಾನ ಕೈಗೊಳ್ಳಲಿದೆ. ಕೊರೋನಾ ಮತ್ತು ಸರ್ಕಾರದ ತೀರ್ಮಾನ ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತಿತರರು ಈಗಾಗಲೇ ಅನೇಕ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರದ ಮಾರ್ಗಸೂಚಿ, ತಜ್ಱರ ಸಲಹೆ ಗಮನದಲ್ಲಿಟ್ಟುಕೊಂಡು ಸರ್ಕಾರ ಅಗತ್ಯ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಈಗಾಗಲೇ ಸ್ಪಷ್ಟಪಡಿಸಿದ್ಧಾರೆ.
ಹೋಟೆಲ್ ಮಾಲೀಕರ ಸಂಘ, ಬಾರ್ ಮತ್ತು ರೆಸ್ಟೋರೆಂಟ್ ಸಂಘಟನೆಗಳ ಒಕ್ಕೂಟ, ಜಿಮ್ ಅಸೋಸಿಯೇಷನ್ ಮತ್ತಿತರ ಸಂಘ-ಸಂಸ್ಥೆಗಳು ವಿಕೇಂಡ್ ಮತ್ತು ರಾತ್ರಿ ಕರ್ಫ್ಯೂ ಬಗ್ಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿ ತೆರೆವುಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಮಧ್ಯಾಹ್ನ 3ರೊಳಗೆ ಸರ್ಕಾರದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.
