ಈಶ್ವರಪ್ಪ ರಾಜಿನಾಮೆಗೆ ಒತ್ತಾಯ, ಮೇಲ್ಮನೆಯಲ್ಲಿ ಮುಂದುವರಿದ ಗದ್ದಲ; ಸದನದ ಸಮಯ ವ್ಯರ್ಥ!

ಬೆಂಗಳೂರು: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಗುರುವಾರವೂ ಮೇಲ್ಮನೆಯಲ್ಲಿ ಮಾರ್ದನಿಸಿತು. ವಿವಾದಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ ಮತ್ತು ಕೋಲಾಹಲ ಏರ್ಪಟ್ಟ ಪರಿಣಾಮ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಸಚಿವ ಈಶ್ವರಪ್ಪ ರಾಜಿನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಬುಧವಾರದಿಂದ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗುರುವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಈಶ್ವರಪ್ಪ ರಾಜಿನಾಮೆಗೆ ಒತ್ತಾಯಿಸಿದರು. ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಸಲೀಂ ಅಹಮ್ಮದ್ ಮತ್ತಿತರರು ಇದಕ್ಕೆ ದನಿಗೂಡಿಸಿದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸರ್ಕಾರದ ಪರವಾಗಿ ಸಮರ್ಥನೆಗಿಳಿದರು. ಸಚಿವ ಈಶ್ವರಪ್ಪರನ್ನು ಹಿಂಡಿ ಹಿಪ್ಪೆ ಮಾಡಬೇಡಿ. ಸದನದ ಸಮಯ ಹಾಳು ಮಾಡಬೇಡಿ. ಈಶ್ವರಪ್ಪ ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸುವಂತಹ ಮಾತುಗಳಿಲ್ಲ. ಈ ಬಗ್ಗೆ ಈಶ್ವರಪ್ಪ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.
ಈಶ್ವರಪ್ಪ ಸೇರಿದಂತೆ ಬಿಜೆಪಿಯ ಯಾರೋಬ್ಬರೂ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಅಗೌರವಿಸುವ ಪ್ರಶ್ನೆಯೇ ಇಲ್ಲ ಎಂದ ಮಾಧುಸ್ವಾಮಿ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಬೇಕು ಎಂದು ಪ್ರತಿಭಟನೆ ನಡೆಸಿದಾಗ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಕಾಂಗ್ರೆಸ್. ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರಪ್ರೇಮದ ಸಿದ್ಧಾಂತವನ್ನು ಬಿಜೆಪಿ ಒಪ್ಪಿ ಅಪ್ಪಿಕೊಂಡಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ನೀವು ಬಿಜೆಪಿಗೆ ಹೊಸಬರು. ನಾನು ಇತಿಹಾಸ ಹೇಳಿದರೆ ಇಲ್ಲಿ ಇನ್ನಷ್ಟು ಗಲಾಟೆಯಾಗುತ್ತದೆ. ಆರ್ ಎಸ್ ಎಸ್ ಮುಖವಾಗಿ ಆರ್ಗನೈಸರ್ ನಲ್ಲಿ ರಾಷ್ಟ್ರಧ್ವಜವನ್ನು ವಿರೋಧಿಸಿ ಬರೆಯಲಾಗಿದೆ. ತ್ರಿವರ್ಣಧ್ವಜದ ಮೂರು ಬಣ್ಣ ಅಪಶಕುನ ಎಂದು ಉಲ್ಲೇಖಿಸಲಾಗಿದೆ ಎಂದು ತಿರುಗೇಟು ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಹಾಜರಿದ್ದಾರೆ ಅವರು ಸಚಿವ ಈಶ್ವರಪ್ಪ ರಾಜಿನಾಮೆ ನಿರ್ಧಾರ ಪ್ರಕಟಿಸಲಿ. ಸಂವಿಧಾನ ಪೀಠದಲ್ಲಿರುವ ಸಭಾಪತಿ ಅವರು ನಮಗೆ ನ್ಯಾಯದೊರಕಿಸಲಿ ಎಂದು ಹರಿಪ್ರಸಾದ್ ಹೇಳಿದರು. ಮಧ್ಯಪ್ರವೇಶಿಸಿದ ಸ್ಪೀಕರ್ ಬಸವರಾಜ ಹೊರಟ್ಟಿ, ಆಡಳಿತ ಮತ್ತು ವಿಪಕ್ಷ ಎರಡು ವಾದಗಳನ್ನು ಆಲಿಸಿದ್ದೇನೆ. ವಿಪಕ್ಷದವರು ವಿವಾದವನ್ನು ಇಲ್ಲಿಗೆ ಬಿಟ್ಟು ಮುಂದಿನ ಕಲಾಪಕ್ಕೆ ಅವಕಾಶ ಕೊಡಬೇಕು ಎಂದು ಹೇಳಿ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.
ಆದರೆ ಚರ್ಚೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಎದುರು ಭಾವಿಗಿಳಿದು ಧರಣಿ ಆರಂಭಿಸಿದರು. ದೇಶದ್ರೋಹಿ ಈಶ್ವರಪ್ಪ ರನ್ನು ಸಂಪುಟದಿಂದ ವಜಾಗೊಳಿಸಬೇಕು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಘೋಷಣೆ ಕೂಗಿ ಬಿತ್ತಿಪತ್ರ ಪ್ರದರ್ಶಿಸಿದರು. ಇದರ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು.
ಗದ್ದಲದ ನಡುವೆಯೇ ಮಾತನಾಡಿದ ಜೆಡಿಎಸ್ ನ ಮರಿತಿಬ್ಬೇಗೌಡ ಹಾಗೂ ಬಿ.ಕೆ.ಹರಿಪ್ರಸಾದ್ ಸರ್ಕಾರಕ್ಕೆ ಸಮಸ್ಯೆ ಬಗೆಹರಿಸುವ ತಾಕತ್ತಿಲ್ಲ. ಜನರ ಹಣ ಪೋಲು ಮಾಡಿ ಕ್ರಮಬದ್ದವಲ್ಲದ ಸದನ ನಡೆಸುವ ಬದಲು ಅಧಿವೇಶನವನ್ನು
ಮುಂದೂಡುವಂತೆ ಕಿಡಿಕಾರಿದರು. ಸದನದಲ್ಲಿ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಸ್ಪೀಕರ್ ಹೊರಟ್ಟಿ ಸದನದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
