Latestಮನರಂಜನೆಸಿನಿಮಾಸೆಲೆಬ್ರಿಟಿ

ಲೇಖನಿ ಸ್ಪರ್ಶ ಪಡೆದ ಪುನೀತ್ ರಾಜ್​ಕುಮಾರ್ ಜೀವನ

ನಟ ಪುನೀತ್ ರಾಜ್​ಕುಮಾರ್ ಅಗಲಿ ಮೂರು ತಿಂಗಳು ಕಳೆದಿದ್ರು ಇಂದಿಗೂ ಆ ಕಹಿ ಸತ್ಯವನ್ನ ಅರಗಿಸಿಕೊಳ್ಳೊಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನ ನೆನಪಿಸಿಕೊಳ್ಳುವ ಕೆಲಸಗಳು ನಿತ್ಯ ನಡೆಯುತ್ತಲೆ ಇದೆ. ಎಲ್ಲರೊಂದಿಗೂ ಉತ್ತಮ ಬಾಂದವ್ಯ ಹೊಂದಿದ್ದ ನಟ ಪುನೀತ್ ರಾಜ್​ಕುಮಾರ್ ಜೀವನ ಕಥನದ ಕೃತಿಯನ್ನ ಸಿನಿಮಾ ಪರ್ತಕರ್ತ ಡಾ.ಶರಣು ಹುಲ್ಲೂರು ಹೊರ ತರುತ್ತಿದ್ದಾರೆ.

ನಟ ಪುನೀತ್ ರಾಜ್​​ಕುಮಾರ್ ಅವರನ್ನ ಶರಣು ಹುಲ್ಲೂರು ತುಂಬಾ ಹತ್ತಿರದಿಂದ ನೋಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಶರಣು ಹುಲ್ಲೂರು, ಪುನೀತ್ ಅವರು ಯಾವತ್ತೂ ವರದಿಗಾರರ ಮೇಲೆ ಮುನಿಸಿಕೊಂಡವರಲ್ಲ. ಫೋನಿಗೆ ಸಿಗದೇ ಸತಾಯಿಸಿದವರಲ್ಲ. ಮಿಸ್ಡ್ ಕಾಲ್ ಇದ್ದರೆ ತಿರುಗಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಅವರು ನಮ್ಮವರೇ ಆಗಿದ್ದರು. ಆ ಪ್ರೀತಿ ಮತ್ತೆಂದೂ ಸಿಗದು. ಹಾಗಾಗಿ ಅವರ ಜೊತೆಗಿನ ಒಡನಾಟವನ್ನ ದಾಖಲಿಸಬೇಕು ಮತ್ತು ಆ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಈ ರೀತಿಯಲ್ಲಿ ಸಿನಿಮಾ ಪರ್ತಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವವಿದು ಎಂದು ಬರೆದುಕೊಂಡಿದ್ದಾರೆ.

ಶರಣು ಹುಲ್ಲೂರು ಪುಸ್ತಕ ಬರೆಯೋಕು ಒಂದು ಕಾರಣವಿದೆ. ಅಂದು ಸುದೀಪ್​ರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನ ಪ್ರೀತಿಯಿಂದ ಬಿಡುಗಡೆ ಮಾಡಿದ್ದು ನಟ ಪುನೀತ್ ರಾಜ್​ ಕುಮಾರ್. ಈ ಸಂದರ್ಭದಲ್ಲಿ ಹಾಜರಿದ್ದ ನಿರ್ಮಾಪಕ ಜಾಕ್ ಮಂಜು ಮುಂದಿನ ಪುಸ್ತಕ ಪುನೀತ್ ಅವರದ್ದೆ ಮಾಡಿ ಎಂದರಂತೆ. ಅಂದು ಮೊದಲಿಗೆ ಬೇಡ ಎಂದಿದ್ದ ಪುನೀತ್ ಬಳಿಕ ಎಲ್ಲರ ಒತ್ತಾಯಕ್ಕೆ ಮಣಿದು ಗ್ರೀನ್ ಸಿಗ್ನಲ್ ನೀಡಿದ್ದರು.

ಶರಣು ಹುಲ್ಲೂರು ಅವರ ಕರೆಯನ್ನೇ ಆರು ತಿಂಗಳ ಕಾಲ ಪುನೀತ್ ಸ್ವೀಕರಿಸುವುದನ್ನೇ ಬಿಟ್ಟಿದ್ದರಂತೆ. ನಾನು ಏನು ಸಾಧನೆ ಮಾಡಿಲ್ಲ.. ಅಪ್ಪಾಜಿ, ಅಮ್ಮನ ಪುಸ್ತಕದ ಜೊತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ ಎಂದಿದ್ದರಂತೆ. ಆದರೆ ಸದ್ದಿಲ್ಲದೆ ಸಾಧನೆ ಮಾಡಿದ ರಾಜಕುಮಾರ ಇದೀಗ ಅಪ್ಪ ಅಮ್ಮನ ಪುಸ್ತಕದ ಮಧ್ಯೆ ಕುಳಿತುಕೊಳ್ಳಲು ರೆಡಿಯಾಗಿದ್ದಾರೆ.

ಪುನೀತ್ ರಾಜ್​ಕುಮಾರ್ ಕುರಿತಾಗಿ ಬರುತ್ತಿರುವ ಮೊಟ್ಟ ಮೊದಲ ಬಯೋಗ್ರಫಿ ಇದು. ಇದರಲ್ಲಿ ಪುನೀತ್ ಜೀವನದ ಕುರಿತಾದ ವಿಷಯಗಳ ಜೊತೆಗೆ ವೃತ್ತಿ ಹಾಗೂ ಖಾಸಗಿ ಜೀವನದ ಕುರಿತಾದ ಅಪರೂಪದ ಮಾಹಿತಿ ಹಾಗೂ ಛಾಯಾಚಿತ್ರಗಳು ಇವೆ. ಪುನೀತ್ ಬಾಲ್ಯ, ಬಾಲ್ಯದ ಸಿನಿಮಾಗಳು ಅರಸು ಸಿನಿಮಾದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಈ ಪುಸ್ತಕದಲ್ಲಿದೆ. 264 ಪುಟಗಳನ್ನ ಈ ಪುಸ್ತಕ ಒಳಗೊಂಡಿದ್ದು 34 ಅಧ್ಯಾಯನಗಳು ಇರಲಿವೆಯಂತೆ. ಅತೀ ಶೀಘ್ರದಲ್ಲಿ ನಾನೇ ರಾಜಕುಮಾರ ಪುಸ್ತಕ ಬಿಡುಗಡೆ ಆಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button