ರಷ್ಯಾ-ಉಕ್ರೇನ್ ನಡುವಿನ ಸಂಧಾನ ಯಶಸ್ವಿ: ಯುದ್ಧ ಅಂತ್ಯವಾಗುತ್ತಾ?

ಇಸ್ತಾನ್ ಬುಲ್ (ಟರ್ಕಿ): ಸರಿ ಸುಮಾರು 34 ದಿನಗಳ ಕಾಲದ ರಷ್ಯ ಮತ್ತು ಉಕ್ರೇನ್ ಯದ್ಧಕ್ಕೆ ತಾರ್ಕಿಕ ಅಂತ್ಯ ಸಿಗುವಂತೆ ಕಾಣುತ್ತಿದೆ. ರಷ್ಯ ಮತ್ತು ಉಕ್ರೇನ್ ನಡುವಿನ ಸಂಧಾನ ಮಾತುಕತೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ರಷ್ಯಾ ಆಕ್ರಮಣಕ್ಕೆ ಬೆದರಿದ ಉಕ್ರೇನ್ ತಟಸ್ಥ ನಿಲುವು ತಾಳುವುದಾಗಿ ಸಂಧಾನ ಸಭೆಯಲ್ಲಿ ಹೇಳಿದೆ. ಆ ಮೂಲಕ ರಷ್ಯಾದ ದಾಳಿಗೆ ಬೆದರಿದ ಉಕ್ರೇನ್, ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ತನ್ನ ಉದ್ದೇಶದಿಂದ ಹಿಂದೆ ಸರಿದಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಮಿಲಿಟರಿ ಚಟುವಟಿಕೆಯನ್ನು ಕಡಿಮೆ ಮಾಡುವುದಾಗಿ ಮಾಸ್ಕೋ ಹೇಳಿದೆ.
ಆ ಮೂಲಕ ನಡೆದ ಸಂಧಾನ ಮಾತುಕತೆಯು ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ ಎಂದು ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮಾತುಕತೆಯ ನಂತರ ರಕ್ಷಣಾ ಸಚಿವರೊಬ್ಬರು ಹೇಳಿದ್ದಾರೆ. ನ್ಯಾಟೋ ಒಕ್ಕೂಟದ ಕನಸು ಕೈಬಿಟ್ಟ ಉಕ್ರೇನ್ ರಷ್ಯಾದೊಂದಿಗಿನ ಇತ್ತೀಚಿನ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿದೆ. ಅಂದರೆ ನ್ಯಾಟೋ ಸೇರಿದಂತೆ ಇತರೆ ಯಾವುದೇ ಸೇನಾ ಮೈತ್ರಿಕೂಟವನ್ನು ಸೇರುವುದಿಲ್ಲ ಅಥವಾ ಸೇನೆ ನೆಲೆಗಳನ್ನು ಆಯೋಜಿಸುವುದಿಲ್ಲ ಎಂದು ನಿಯೋಗವು ಹೇಳಿದೆ.
ಉಕ್ರೇನ್ ಪರ ಸಂಧಾನಕಾರನಿಗೆ ಎಚ್ಚರಿಕೆ ಸಂದೇಶ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬರೆದಿರುವ ಶಾಂತಿ-ಸಂಧಾನದ ಪತ್ರವನ್ನು ಸಂಧಾನಕಾರ ರೋಮನ್ ಅಬ್ರಮೊವಿಚ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದರು. ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಸಂಧಾನ ಮಾತುಕತೆಗೆ ಮುಂದಾದರು. ಆದರೆ, ಈ ವೇಳೆ ಕೆರಳಿದ ಪುಟಿನ್, ಆ ಉಕ್ರೇನ್ ಅಧ್ಯಕ್ಷರನ್ನು ನಾನು ಸೋಲಿಸಿಯೇ ತೀರುತ್ತೇನೆ ಎಂದು ಗುಡುಗಿದ್ದಾರೆ ಎಂಬುದಾಗಿ ವರದಿಯಾಗಿದೆ.
