ಹೊರಟ್ಟಿಯವರನ್ನ ಬಿಜೆಪಿಗೆ ಬನ್ನಿ ಅಂತ ಯಾರು ಕರೆದಿಲ್ಲ: ಮೋಹನ್

ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿಗಳಾಗಿರುವ ಬಸವರಾಜ್ ಹೊರಟ್ಟಿಯವರನ್ನು ಬಿಜೆಪಿಗೆ ಬನ್ನಿ ಎಂದು ನಮ್ಮ ಪಕ್ಷದ ಯಾರೊಬ್ಬರೂ ಆಹ್ವಾನ ಮಾಡಿಲ್ಲ. ಅವರಷ್ಟಕ್ಕೆ ಅವರೇ ನಾನು ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬಿಜೆಪಿಗೆ ಅವರ ಸೇರ್ಪಡೆಯಾಗುತ್ತಿರುವುದರ ಬಗ್ಗೆ ಇದುವರೆಗೂ ಅವರು ಕೇಳಿಯೇ ಇಲ್ಲ ಎಂದು ಬಿಜೆಪಿ ಮುಖಂಡ ಮೋಹನ್ ಲಿಂಬಿಕಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ್ ಹೊರಟ್ಟಿಯವರನ್ನು ಅಧಿಕೃತವಾಗಿ ಬಿಜೆಪಿಯ ನಮ್ಮ ನಾಯಕರು ಅಹ್ವಾನವೇ ನೀಡಿಲ್ಲ. ಹಾಗಾಗಿ ಅವರ ಸೇರ್ಪಡೆ ಕುರಿತಂತೆ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ. ಅವರ ಪಕ್ಷ ಸೇರ್ಪಡೆ ಕುರಿತು ನಮ್ಮ ಪಕ್ಷದ ಪದಾಧಿಕಾರಿಗಳಾಗಲ್ಲಿ, ಕಾರ್ಯದರ್ಶಿಗಳಲಾಗಲಿ ಅಥವಾ ರಾಜ್ಯ ಮಟ್ಟದ ನಾಯಕರಾಗಲಿ ಯಾರೂ ಬಹಿರಂಗವಾಗಿ ಆಹ್ವಾನ ನೀಡಿಲ್ಲ. ಈಗ ಪರಿಷತ್ ಚುನಾವಣೆ ಸಮೀಪವಾಗುತ್ತಿದೆ, ಹೊರಟ್ಟಿಯವರಿಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಅಭದ್ರತೆ ಕಾಡುತ್ತಿದೆ. ಹಾಗಾಗಿ ಈಗ ಬಿಜೆಪಿ ಸೇರ್ಪಡೆ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಜೆಡಿಎಸ್‌ನಲ್ಲಿ ಸೋಲುವ ಭೀತಿಯಿಂದ ಅವರು ಟಾವೆಲ್ಲನ್ನು ಬೇರೆ ಕಡೆಗೆ ಹಾಕುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಟಾವೆಲ್ ಹಾಕಲು ಸ್ಥಳವಿಲ್ಲ. ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷ, 76 ವರ್ಷ ಆದವರಿಗೆ ಚುನಾವಣೆಗೆ ನಿಲ್ಲಲು ಅವಕಾಶವಿಲ್ಲ. ನಮ್ಮಲ್ಲಿ ಸಾಕಷ್ಟು ಸಮರ್ಥರಿದ್ದಾರೆ. ಹಾಗಾಗಿ ನಮ್ಮ ವರಿಷ್ಠರು ನಮ್ಮನ್ನು ಹೊರತು ಪಡಿಸಿ ಪಕ್ಷದಲ್ಲಿರುವ ಬೇರೆಯವರಿಗೆ ಅವಕಾಶ ನೀಡಿದರು ನಾನು ಸ್ವಾಗತ ಮಾಡುತ್ತೇನೆ ಎನ್ನುವ ಮೂಲಕ ಹೊರಟ್ಟಿಯವರ ಬಿಜೆಪಿ ಸೇರ್ಪಡೆ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದರು
