ಇಂದಿನ ದಿನವನ್ನು ಅಭಿಮಾನಿಗಳ ದಿನವನ್ನಾಗಿ ಘೋಷಿಸಿ: ಸಾಧುಕೋಕಿಲ

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ. ಅಪ್ಪು ಬರ್ತಡೇಯನ್ನ ಅಭಿಮಾನಿಗಳು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಪ್ಪು ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಅನ್ನ ಸಂತರ್ಪಣೆ ಮಾಡಿ ಅಪ್ಪು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಈ ಮಧ್ಯೆ ನಟ ಸಾಧು ಕೋಕಿಲ ಮನವಿಯೊಂದನ್ನ ಮಾಡಿದ್ದಾರೆ.
ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಹಾಸ್ಯ ನಟ ಸಾಧುಕೋಕಿಲ ಕಂಠೀರವ ಸ್ಟುಡಿಯೋಗೆ ಆಗಮಿಸಿ, ಪುನೀತ್ ಸಮಾಧಿ ದರ್ಶನ ಪಡೆದಿದ್ಧಾರೆ. ಬಳಿಕ ಮಾತನಾಡಿದ ಅವರು, ‘‘ಇಂದಿನ ದಿವನ್ನು ಅಭಿಮಾನಿಗಳ ದಿನವನ್ನಾಗಿ ಘೋಷಿಸಬೇಕು’’ ಎಂದು ಮನವಿ ಮಾಡಿದ್ದಾರೆ.
‘‘ಇವತ್ತು ಅಪ್ಪು ಸಿನಿಮಾ ಜೇಮ್ಸ್ ರಿಲೀಸ್ ಆಗಿರೋದು ಸಂತೋಷ ತಂದಿದೆ. ಇವತ್ತು ಉತ್ಸವದ ರೀತಿಯಲ್ಲಿ ಸಿನಿಮಾ ಹಾಗೂ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಅವರು ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಅನ್ನೋದನ್ನ ನೋಡಿ ಖುಷಿ ಆಗುತ್ತಿದೆ. ಇದ್ರಿಂದ ಜನರ ಬಳಿ ಪುನೀತ್ ನಡೆದುಕೊಂಡು ರೀತಿ ಗೊತ್ತಾಗುತ್ತಿದೆ. ಹೀಗಾಗಿ ಇಂದಿನ ದಿನವನ್ನು ಅಭಿಮಾನಿಗಳ ದಿನಾಚರಣೆ ಎಂದು ಘೋಷಿಸಬೇಕು’’ ಎಂದಿದ್ದಾರೆ.
ಜೇಮ್ಸ್ ಸಿನಿಮಾ ಡಬ್ಬಿಂಗ್ ಮಾಡುವಾಗ 10 ಸಲ ಹೋಗಿ ಬಂದಿದ್ದೇನೆ. ಅವರನ್ನು ನೆನೆಸಿಕೊಂಡಾಗಲೆಲ್ಲ ಕೈ ನಡುಗುತ್ತದೆ. ಬೆಟ್ಟದ ಹೂವಿನಲ್ಲಿರುವ ಅಪ್ಪು ಸರ್ ಮುಖ ಹಾಗೆ ಉಳಿದಿದೆ. ಅವರು ಸದಾ ಹೀಗೆ ನಮ್ಮ ಜೊತೆಯಲ್ಲಿರುತ್ತಾರೆ ಎಂದು ಸಾಧು ಕೋಕಿಲ ಹೇಳಿದ್ದಾರೆ.
