ಬೆಣ್ಣೆನಗರಿಯಲ್ಲಿ ಜೇಮ್ಸ್ ಹವಾ ಜೋರು: ಶೋಗಳ ಟಿಕೆಟ್ ಸೋಲ್ಡ್ ಔಟ್…!

ದಾವಣಗೆರೆ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ನಾಡಹಬ್ಬದಂತೆ ಆಚರಿಸಲಾಗುತ್ತಿದೆ. ಬೆಣ್ಣೆನಗರಿಯಲ್ಲಿಯೂ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಹವಾ ಜೋರಾಗಿದೆ. ದಿನದ ಎಲ್ಲಾ ಪ್ರದರ್ಶನಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಿರುವ ಜೇಮ್ಸ್ ಚಿತ್ರ ನೋಡಲು ಬೆಳಿಗ್ಗೆ 6ಗಂಟೆಯಿಂದಲೇ ಅಪ್ಪು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ದಾವಣಗೆರೆಯ ವಸಂತ ಹಾಗೂ ಗೀತಾಂಜಲಿ ಸಿನಿಮಾ ಥಿಯೇಟರ್ ಗಳ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಚಿತ್ರಮಂದಿರದ ಮುಂದೆಯೇ ಕೇಕ್ ಕತ್ತರಿಸಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದರು.
ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಟಿಕೆಟ್ ಸಿಗದೇ ಸುಮಾರು ಅಭಿಮಾನಿಗಳ ನಿರಾಸೆ ಅನುಭವಿಸಿದರು. ಚಿತ್ರ ಮಂದಿರದ ಬಳಿ ಮಧ್ಯರಾತ್ರಿಯಿಂದಲೇ ಟಿಕೆಟ್ ಗಾಗಿ ಅಭಿಮಾನಿಗಳ ಬಳಗ ಠಿಕಾಣಿ ಹೂಡಿತ್ತು.
ಒಂದೆಡೆ ಪುನೀತ್ ಅಭಿಮಾನಿಗಳು ಶೋ ನೋಡಿ ಅಪ್ಪುವಿನ ನಟನೆಗೆ ಫಿದಾ ಆಗಿದ್ದರೆ, ಮತ್ತೊಂದೆಡೆ ಅಪ್ಪುವಿನ ಕೊನೆಯ ಚಿತ್ರ ಇದು ಎಂಬ ಭಾರವಾದ ಮನಸ್ಸಿನಿಂದಲೇ ಚಿತ್ರ ಮಂದಿರದಿಂದ ಹೊರ ಬರುತ್ತಿದ್ದ ದೃಶ್ಯ ಕಂಡು ಬಂತು.
ಗೀತಾಂಜಲಿ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರಾರಂಭದಲ್ಲಿ ಪುನೀತ್ ಎಂಟ್ರಿ ನೀಡುತ್ತಿದ್ದಂತೆ ಪಟಾಕಿ ಸಿಡಿಸಿ ಸಂತಸ ಪಟ್ಟರು. ಜೋರಾದ ಶಿಳ್ಳೆ, ಚಪ್ಪಾಳೆಯೊಂದಿಗೆ ಜೇಮ್ಸ್ ನನ್ನು ಬರಮಾಡಿಕೊಂಡರು. ಕೆಲವರಂತೂ ಭಾವುಕರಾಗಿ ಕಣ್ಣೀರು ಹಾಕಿದರು. ಫ್ಯಾನ್ಸ್ ಶೋಗೆ ಹೆಣ್ಣು ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು ವಿಶೇಷವಾಗಿತ್ತು.
ಗೀತಾಂಜಲಿ ಚಿತ್ರಮಂದಿರದಲ್ಲಿ ಸಿನಿಮಾ ಟಿಕೇಟ್ ಗಾಗಿ ರಾತ್ರಿಯೇ ಬಂದು ಅಲ್ಲೆ ಮಲಗಿದ್ದ ದೃಶ್ಯ ಕೂಡ ಕಂಡು ಬಂತು. ಇನ್ನು ರಾಜ್ ಕುಮಾರ್ ಅಭಿಮಾನಿಗಳ ಸಂಘದ ಒಕ್ಕೂಟದಿಂದ ಬೆಳಿಗ್ಗೆ 7.30 ಕ್ಕೆ ನಿಟ್ಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಜೇಮ್ಸ್ ಚಿತ್ರದ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಪುನೀತ್ ರಾಜಕುಮಾರ್ ಅವರ 47 ನೇ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ 47 ಆಟೋಗಳ ಮೇಲೆ ಪುನೀತ್ ಕಟೌಟ್ ನಿಲ್ಲಿಸಿ, ದೇವಸ್ಥಾನದಿಂದ ವಸಂತ ಚಿತ್ರ ಮಂದಿರದವರೆಗೆ ಅಭಿಮಾನಿಗಳು ಮೆರವಣಿಗೆ ಮಾಡಿದರು. ಚಿತ್ರಮಂದಿರದಲ್ಲಿ ಪುನೀತ್ ಕಟೌಟ್ ಗೆ ಹಾಲಿನ ಅಭಿಷೇಕ, ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಲಾಯಿತು. ನಂತರ ಪ್ರೇಕ್ಷಕರಿಗೆ ಸಿಹಿ ವಿತರಿಸಲಾಯಿತು.
