
ವಿಶೇಷ ವರದಿ
ಬೆಂಗಳೂರು: ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿ. ಎಸ್ ಯಡಿಯೂರಪ್ಪನವರ ಪಾತ್ರವೇನು ಏನು ಮತ್ತು ಅವರ ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕೇ , ಬೇಡವೇ ಎಂಬ ಹಲವು ವಿಚಾರಗಳ ಬಗ್ಗೆ ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಕಾರ್ಯಕಾರಿಣಿ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಜರಾಗಬೇಕಿತ್ತು ಆದರೆ ಕೋವಿಡ್ ಕಾರಣದಿಂದ ಕಡೆಗಳಿಗೆಯಲ್ಲಿ ಅವರ ಪ್ರವಾಸ ರದ್ದಾಗಿದೆಯೆಂದು ಪಕ್ಷದ ಮೂಲಗಳು ಹೇಳಿವೆ.
ಕಾರ್ಯಕಾರಿಣಿ ಸಭೆಯಲ್ಲಿ ಸುಮಾರು 600 ಜನ ಭಾಗವಹಿಸಬೇಕಾಗಿತ್ತು ಆದರೆ ಕೋವಿಡ್ ನಿಯಮ ಪಾಲನೆ ಕಾರಣ ಕಾರ್ಯಕಾರಿಣಿಗೆ ಹಾಜರಾಗುವ ಮುಖಂಡರ ಸಂಖ್ಯೆಯನ್ನು ಕೇವಲ 300ಕ್ಕೆ ಸೀಮಿತಗೊಳಿಸಲಾಗಿದೆ.
ಪಕ್ಷದ ಸಂಘಟನೆ, ಮುಂದೆ ಬರಲಿರುವ ಬಿಬಿಎಂಪಿ ಚುನಾವಣೆ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಆನಂತರ ಬರುವ ವಿಧಾನಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಎರಡು ದಿನಗಳ ಕಾರ್ಯಕಾರಣಿ ಕನ್ನಡಿಯಲ್ಲಿ ಚಿಂತನ- ಮಂಥನ ನಡೆಯಲಿದೆ.
ಕಾಂಗ್ರೆಸ್ ಒಡಕು
ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನಡುವಣ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಿಜೆಪಿ ಮುಂದೆ ಹೇಗೆ ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕು. ಅದಕ್ಕೆ ಯಾವ ಪಟ್ಟುಹಾಕಬೇಕು ಎಂಬುದರ ಬಗ್ಗೆಯೂ ವ್ಯಾಪಕವಾಗಿ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.
11 ವರ್ಷಗಳ ಬಳಿಕ ಉತ್ತರ ಕರ್ನಾಟಕ ಭಾಗದ ಕೇಂದ್ರಬಿಂದು ಎನಿಸಿರುವ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಬೆಳಗಾವಿ ವಿಧಾನ ಪರಿಷತ್ತು ಹಾಗೂ ಹಾನಗಲ್ ವಿಧಾನಸಭೆ ಉಪಚುನಾವಣೆಯ ಸೋಲಿಗೆ ಕಾರಣಗಳು ಏನು, ಏಕೆ ಇಂತಹ ಫಲಿತಾಂಶ ಬಂತು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ.
ವಿವಾದಾತ್ಮಕ ವಿಧೇಯಕಗಳು
ಗೋಹತ್ಯೆ ನಿಷೇಧ ಮಸೂದೆ ಮತ್ತು ಮತಾಂತರ ನಿಷೇಧ ಮಸೂದೆ ಜಾರಿಯಿಂದ ಬಿಜೆಪಿಗೆ ಯಾವ ರೀತಿ ರಾಜಕೀಯವಾಗಿ ಅನುಕೂಲವಾಗಲಿದೆ. ಜನರ ಅಭಿಪ್ರಾಯ ಯಾವ ರೀತಿ ಇದೆ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ.
ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ , ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಂದಿನ ವಿಧಾನಸಭಾ ಚುನಾವಣೆಯನ್ನು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿ ನಾಯಕತ್ವದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಯಡಿಯೂರಪ್ಪ ಬದಲಾವಣೆಗೂ ಮುನ್ನ ಇದೇ ರೀತಿ ಅಭಿಪ್ರಾಯಗಳು ಕೇಸರಿ ನಾಯಕರಿಂದ ವ್ಯಕ್ತವಾಗಿದ್ದವು.
ಜಾರಕಿಹೊಳಿಗೆ ಜೀವ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರು ಸಚಿವ ಸ್ಥಾನಕ್ಕಾಗಿ ಪಟ್ಟು ಹಾಕುತ್ತಿದ್ದು, ಅವರಿಗೆ ಮತ್ತೆ ಅವಕಾಶ ಮಾಡಿಕೊಡಬೇಕೆ ಬೇಡವೆ ಎಂಬ ವಿಚಾರವು ಸಭೆಯಲ್ಲಿ ಚರ್ಚೆಯಾಗಲಿದೆ. ಒಂದು ವೇಳೆ ಅವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದಲ್ಲಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅಥವಾ ಇತ್ತೀಚೆಗೆ ತಾನೇ ಪರಿಷತ್ತಿಗೆ ಆಯ್ಕೆಯಾಗಿರುವ ಲಖನ್ ಜಾರಕಿಹೊಳಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಂತ್ರಿಸ್ಥಾನ ನೀಡಿದರೆ ಅದರಿಂದ ಬಿಜೆಪಿಗೆ ರಾಜಕೀಯವಾಗಿ ಲಾಭವಾಗಲಿದೆಯೇ ಎಂಬುದರ ಬಗ್ಗೆಯೂ ಬಿಸಿ, ಬಿಸಿ ಚರ್ಚೆ ನಡೆಯಲಿದೆ ಸಂಭವವಿದೆ.
