ಬ್ಯಾಂಕ್ ಲಾಕರ್ನಲ್ಲಿ 18 ಗಂಟೆ ಲಾಕ್ ಆಗಿದ್ದ ವೃದ್ಧ

ಹೈದ್ರಾಬಾದ್: ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯದಿಂದ 84 ವರ್ಷದ ವಯೋ ವೃದ್ಧರೊಬ್ಬರು ಇಡೀ ರಾತ್ರಿ ಬ್ಯಾಂಕ್ ಲಾಕರ್ನಲ್ಲಿಯೇ ಕಳೆದ ಘಟನೆ ಹೈದ್ರಾಬಾದ್ನ ಬ್ಯಾಂಕ್ ಒಂದರಲ್ಲಿ ನಡೆದಿದೆ.
ಸುಮಾರು 18 ಗಂಟೆಗಳ ಕಾಲ ಬ್ಯಾಂಕ್ ನ ಲಾಕರ್ ರೂಮ್ನಲ್ಲಿಯೇ ಲಾಕ್ ಆಗಿದ್ದ ವೃದ್ಧನನ್ನ ಪೊಲೀಸರು ರಕ್ಷಿಸಿದ್ದಾರೆ. ಲಾಕರ್ ರೂಮ್ನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ ವೃದ್ಧನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಲಾಕರ್ ತೆಗೆಯಲು ವೃದ್ಧ ಬ್ಯಾಂಕ್ ಗೆ ಭೇಟಿ ನೀಡಿದ್ದಾರೆ. ಆದರೆ ವೃದ್ದನನ್ನು ಗಮನಿಸದ ಬ್ಯಾಂಕ್ ಸಿಬ್ಬಂದಿ, ಲಾಕರ್ ಒಳಗಡೆಯೇ ಅವರನ್ನು ಬಿಟ್ಟು ಬೀಗ ಹಾಕಿಕೊಂಡು ತೆರಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದ ಮನೆಗೆ ವಾಪಸ್ ಬಾರದಿದ್ದಾಗ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು. ತನಿಖೆ ಕೈಗೊಂಡ ಜುಬಿಲಿ ಹಿಲ್ಸ್ ಠಾಣಾ ಪೊಲೀಸರು ಸಿಸಿಟಿವಿ ಪರೀಕ್ಷಿಸಿದಾಗ ವೃದ್ಧ ಜುಬಿಲಿ ಹಿಲ್ಸ್ ಚೆಕ್ ಪೋಸ್ಟ್ ಮೂಲಕ ರಸ್ತೆ ದಾಟಿ, ಬ್ಯಾಂಕ್ ಆವರಣ ಪ್ರವೇಶಿಸಿರುವುದು ಪತ್ತೆಯಾಗಿತ್ತು.
ಬ್ಯಾಂಕ್ ನಲ್ಲಿದ್ದ ಎಲ್ಲಾ ಸಿಬ್ಬಂದಿ ಹೊರ ಬಂದಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ ವೃದ್ದ ಮಾತ್ರ ಬ್ಯಾಂಕ್ನಿಂದ ಹೊರ ಬಂದಿರಲಿಲ್ಲ. ಬಳಿಕ ಪೊಲೀಸರು ಬ್ಯಾಂಕ್ಗೆ ಆಗಮಿಸಿ, ಲಾಕರ್ ತೆಗೆಸಿದಾಗ ಅದರೊಳಗೆ ವೃದ್ದ ಪತ್ತೆಯಾಗಿದ್ದಾರೆ.
