Breaking NewsLatestಕೊಡಗುಜಿಲ್ಲಾ ಸುದ್ದಿ

ಕೊಡಗಿಗೊಂದು ಮಿನಿ ವಿಮಾನ ನಿಲ್ದಾಣ: 15 ಕೋಟಿ ರೂಪಾಯಿ ವೆಚ್ಚ

ಕೊಡಗು: ಕೊಡಗು ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ಬೇಕು ಎಂಬುದು ಜಿಲ್ಲೆಯ ಜನರ ಬಹುಕಾಲದ ಬೇಡಿಕೆ. ಅದೀಗ ಈಡೇರುವ ಹಂತ ತಲುಪಿದೆ. ಕೊಡಗಿನ ಜನರು ತಮ್ಮ ಅಗತ್ಯತೆಗಳಿಗೆ ಅನುಸಾರ ವಿಮಾನದಲ್ಲಿ ಪ್ರಯಾಣಿಸಲು ಅಕ್ಕ ಪಕ್ಕದ ಜಿಲ್ಲೆಗಳಾದ ಮಂಗಳೂರು, ಬೆಂಗಳೂರು ಅಥವಾ ಕೇರಳ ರಾಜ್ಯದ ಕಣ್ಣೂರಿನ ವಿಮಾನ ನಿಲ್ದಾಣವನ್ನು ಅವಲಂಭಿಸಬೇಕಿತ್ತು. ಆದ್ರೆ ಈ ಸಾಲಿನ ಬಜೆಟ್ ನಲ್ಲಿ ಕೊಡಗಿಗೊಂದು ಮಿನಿ ವಿಮಾನ ನಿಲ್ದಾಣಕ್ಕೆಂದು ಹಣ ಘೋಷಣೆಯಾಗಿದೆ.

ಹೌದು, ಕೊಡಗಿನ ಪ್ರಯಾಣಿಕರಿಗೆ ಜಿಲ್ಲೆಯ ಕುಶಾಲನಗರದ ಕೂಡಿಗೆಯಲ್ಲಿ ಮಿನಿ ವಿಮಾನ ನಿಲ್ದಾಣ ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಡಿ ಇಟ್ಟಿದ್ದು, ಈ ಬಾರಿಯ ಬಜೆಟ್’ನಲ್ಲಿ 15 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ಮಾಡುವ ಸರಕಾರದ ಚಿಂತನೆಯಂತೆ ಕೊಡಗು ಜಿಲ್ಲೆಯಲ್ಲೂ ಮಿನಿ ವಿಮಾನ ನಿಲ್ದಾಣ ಅರಂಭಿಸಲು ಕಳೆದ 5 ವರ್ಷಗಳಿಂದಲೂ ವಿವಿಧ ಜಾಗಗಳ ಪರಿಶೀಲನೆ ನಡೆಸಲಾಗಿತ್ತು.

ಅದರಂತೆ ಕಳೆದ ನಾಲ್ಕು ವರ್ಷಗಳಿಂದಲೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿಧಾನ ಸಭೆಯಲ್ಲೂ ಅನೇಕ ಬಾರಿ ಸರಕಾರದ ಗಮನಸೆಳೆದಿದ್ದರು. ಇದಕ್ಕೆ ಪೂರಕ‌ ಎಂಬಂತೆ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಮಾಡುವುದಕ್ಕಾಗಿ ಬಜೆಟ್’ನಲ್ಲಿ 15 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅಪ್ಪಚ್ಚುರಂಜನ್ ಅವರು, ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಅರಂಭಿಸುವ ಸಂಬಂಧ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ, ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳುವಾರ ಮತ್ತು ಕೂಡಿಗೆಯ ಕೃಷಿ ಕ್ಷೇತ್ರದ ಅವರಣದಲ್ಲಿರುವ ಜಾಗಗಳನ್ನು ಕೇಂದ್ರ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ‌ಅವರ ತಂಡ ಸ್ಧಳ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಈ ಪೈಕಿ ಕೂಡಿಗೆಯ ಕೃಷಿ ಕ್ಷೇತ್ರದ 165 ಎಕರೆಗಳಷ್ಟು ಪ್ರದೇಶದ ಜಾಗ ವಿಮಾನ‌ ನಿಲ್ದಾಣ ನಿರ್ಮಾಣಕ್ಕೆ ಉತ್ತಮವಾಗಿರುವುದಾಗಿ ವರದಿ ನೀಡಿದ್ದಾರೆ. ಅದರಂತೆ ಸಂಬಂಧಿಸಿದ ಇಲಾಖೆ ವತಿಯಿಂದ ಪತ್ರ ವ್ಯವಹಾರ ಮತ್ತು ಯೋಜನೆ ಕಾರ್ಯಗತಗೊಳಿಸಲು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು. ಒಟ್ನಲ್ಲಿ ಕೊಡಗಿನ ಜನರು ಬಯಸಿದಂತೆಯೇ ವಿಮಾನ ನಿಲ್ದಾಣ ಬರಲಿದೆ. ಕಾಮಗಾರಿ ಶುರುವಾಗೋದು ಯಾವಾಗ ಅನ್ನುವುದರತ್ತ ಎಲ್ಲರ ಚಿತ್ತ ನೆಟ್ಟಿದೆ.

Spread the love

Related Articles

Leave a Reply

Your email address will not be published. Required fields are marked *

Back to top button