ಪಂಚಭೂತಗಳಲ್ಲಿ ಗಾನಕೋಗಿಲೆ ಲತಾ ಮಂಗೇಶ್ಕರ್ ಲೀನ

ಮುಂಬಯಿ: ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ಅವರು ಭಾನುವಾರ ಸಂಜೆ ಪಂಚಭೂತಗಳಲ್ಲಿ ಲೀನರಾದರು. ಇಲ್ಲಿನ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಲತಾ ಅವರ ಪಾರ್ಥಿವ ಶರೀರದ ಮೇಲೆ ಹೊದಸಲಾಗಿದ್ದ ತ್ರಿವರ್ಣಧ್ವಜವನ್ನು ಹೃದಯನಾಥ್ ಮಂಗೇಶ್ಕರ್ ಅವರ ಪುತ್ರ ಆದಿನಾಥ್ ಮಂಗೇಶ್ಕರ್ ಸ್ವೀಕರಿಸಿದರು.
ಇದಕ್ಕೂ ಮುನ್ನ ಸಂಜೆ ಐದರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬಯಿಗೆ ಬಂದಿಳಿದರು. ನೇರವಾಗಿ ಲತಾ ಮಂಗೇಶ್ಕರ್ ಪಾರ್ಥಿವ ಶರೀರ ಇರಿಸಲಾಗಿದ್ದ ಶಿವಾಜಿ ಪಾರ್ಕ್ ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮುಂಬಯಿ ವಿಮಾನನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಸಚಿವ ಆದಿತ್ಯ ಠಾಕ್ರೆ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಬರಮಾಡಿಕೊಂಡರು.
ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ಮಹಾರಾಷ್ಟ್ರ ಮೂಲದ ಕೇಂದ್ರದ ಎಲ್ಲಾ ಸಚಿವರು ಪಾಲ್ಗೊಂಡಿದ್ದರು. ಸ್ವರ ಸಾಮ್ರಾಟೆ ಲತಾ ಮಂಗೇಶ್ಕರ್ ಅವರು ಭಾನುವಾರ ಬೆಳಗ್ಗೆ 8ರ ವೇಳೆಗೆ ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು.
