ವೆಂಕಟಾಚಲ ಶಾಸ್ತ್ರೀ, ಹಾಲ್ದೊಡ್ಡೇರಿ ಸುಧೀಂದ್ರ, ಸಯ್ಯದ್ ಇಸಾಕ್ಗೆ ಪುಸ್ತಕ ಪ್ರಾಧಿಕಾರ ಪ್ರಶಸ್ತಿ

ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ಸಾಹಿತಿ ಡಾ. ಟಿ ವಿ ವೆಂಕಟಾಚಲ ಶಾಸ್ತ್ರೀ, ಲೇಖಕ ಹಾಲ್ದೊಡ್ಡೇರಿ ಸುಧೀಂದ್ರ ಹಾಗೂ ಸಾಹಿತ್ಯ ಪರಿಚಾರಕ ಸಯ್ಯದ್ ಇಸಾಕ್ ಆಯ್ಕೆಯಾಗಿದ್ದಾರೆ.
ವೆಂಕಟಾಚಲ ಶಾಸ್ತ್ರೀ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ, ಮೈಸೂರಿನ ಸಯ್ಯದ್ ಇಸಾಕ್ ಅವರನ್ನು ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ, ಸುಧೀಂದ್ರ ಹಾಲ್ದೊಡ್ಡೇರಿ ಅವರನ್ನು ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದ್ದಾರೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನಕ್ಕೆ ನೀಡಲಾಗಿದೆ.
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ 1 ಲಕ್ಷ ನಗದು, ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ 75,000 ರೂ., ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ 50,000 ರೂ., ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ರೂ.25,000 ರೂ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.




