ಸಾಲ ವಾಪಸ್ ಕೇಳಿದ ಸ್ನೇಹಿತನನ್ನು 20 ಲಕ್ಷ ಇನ್ಸೂರೆನ್ಸ್ ಮಾಡಿಸಿ ಕೊಂದರು

ಕಲಬುರಗಿ: ಬದುಕು ಕಟ್ಟಿಕೊಳ್ಳಬೇಕು ಅಂತ ಆ ಮುಗ್ಧ ಹಳ್ಳಿ ಬಿಟ್ಟು ಸಿಟಿ ಸೇರಿದ. ಸ್ನೇಹಿತ ಕಷ್ಟದಲ್ಲಿದ್ದಾನೆ ಅಂತ ತನ್ನ ಹೊಲವನ್ನೆ ಮಾರಿ ಹಣ ಕೊಟ್ಟ. ಆದರೆ ಕೊಟ್ಟ ಹಣ ವಾಪಸ್ ಕೇಳಿದಾಗ ನಡೆದಿದ್ದು ಮಾತ್ರ ದುರಂತ.. ಹಣ ಹಿಂದಿರುಗಿಸಬೇಕಾದವ ಸ್ನೇಹಿತನ ಪ್ರಾಣವನ್ನೆ ತೆಗೆದ. ಕೊಲೆಗೂ ಮುನ್ನ 20 ಲಕ್ಷದ ಇನ್ಸೂರೆನ್ಸ್ ಮಾಡಿಸಿ ರಸ್ತೆ ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದ. ಕಡೆಗೂ ಈ ರಹಸ್ಯವನ್ನು ಪೊಲೀಸರು ಬಯಲಿಗೆಳಿದಿದ್ದಾರೆ.
ಕಳೆದ ಏ. 7ರಂದು ಕಲಬುರಗಿ ಹೊರವಲಯದ ಶಹಬಾದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ಥೀತಿಯಲ್ಲಿ ಪತ್ತೆಯಾಗಿದ್ದ. ಪೊಲೀಸರಿಗೆ ಆತ ಜೇವರ್ಗಿ ತಾಲ್ಲೂಕಿನ ಗಂವ್ಹಾರ್ ಗ್ರಾಮದ ಕಂಠೆಪ್ಪ ಎಂದು ಗೊತ್ತಾಯಿತು. ಕಂಠೆಪ್ಪ ಗಂವ್ಹಾರ್ ಗ್ರಾಮದಲ್ಲಿ ತನ್ನ ಮೂರು ಎಕರೆ ಜಮೀನಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಕೃಷಿ ಮಾಡಿಕೊಂಡಿದ್ದ. ಬಳಿಕ ಅದೇನಾಯ್ತೋ ಹಳ್ಳಿ ಬಿಟ್ಟು ಕಲಬುರಗಿ ಸಿಟಿ ಸೇರಿದ್ದ. ಕಲಬುರಗಿ ನಗರದ ನೃಪತುಂಗ ಕಾಲೋನಿಯಲ್ಲಿ ತನ್ನ ಸ್ನೇಹಿತನ ಮನೆಯಲ್ಲೆ ಬಾಡಿಗೆ ಮನೆ ಮಾಡಿಕೊಂಡು ಪೇಂಟಿಂಗ್ ಕೆಲಸ ಹಾಗೂ ಹೊಟೇಲ್ ಗಳಿಗೆ ಹಾಲು ಹಾಕುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
ನಾಳೆ ಊರಿಗೆ ಬರ್ತಿನಿ ಎಂದಿದ್ದ ಕಂಠೆಪ್ಪ
ಏಪ್ರಿಲ್ 7ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಪೇಂಟಿಂಗ್ ಕೆಲಸ ಮಾಡಿದ ಕಂಠೆಪ್ಪ, ಸಂಜೆ ಹಾಲು ಹಾಕೋಕೆ ಹೋಗಿದ್ದ. ಹಾಗೆ ಹೋಗುವ ಮುನ್ನ ಹೆಂಡತಿಗೆ ಕರೆ ಮಾಡಿ, ನಾಳೆ ಊರಿಗೆ ಬರೋದಾಗಿ ಹೇಳಿದ್ದ. ಬಳಿಕ ಹಾಲು ಹಾಕೋದಕ್ಕೆ ಅಂತಾ ಶಹಬಾದ್ ರಸ್ತೆಯ ಕಡೆ ಹೋಗಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿ ಅಲ್ಲಿಂದ ಕಾಲು ಕಿತ್ತಿದ್ದರು. ಇತ್ತ ಗಂಡ ಮನೆಗೆ ಬರ್ತಾನೆ ಅಂತಾ ಕಾಯುತ್ತ ಕುಳಿತಿದ್ದ ಹೆಂಡತಿಗೆ ಗಂಡನ ಸಾವಿನ ಸುದ್ದಿಯ ಬರಸಿಡಿಲು ಬಡಿದಿತ್ತು.
ಹೆಂಡತಿ ಅನುಮಾನ ನಿಜವಾಯ್ತು
ಕಂಠೆಪ್ಪನನ್ನ ಕೊಲೆ ಮಾಡಿದ ಬಳಿಕ ಅದನ್ನು ಅಪಘಾತ ಎಂಬಂತೆ ಬಿಂಬಿಸೋದಕ್ಕೆ ಸ್ನೇಹಿತರು ಆತನ ಬೈಕ್ ರಸ್ತೆ ಪಕ್ಕದಲ್ಲಿ ಬಿಸಾಡಿ ಡ್ಯಾಮೇಜ್ ಮಾಡಿದ್ದರು. ಅಪಘಾತ ಆದಾಗ ಏನೆಲ್ಲ ಗಾಯ ಆಗುತ್ತೋ ಹಾಗೆ ಕಂಠೆಪ್ಪನ ಮೈಮೇಲೆ ಗಾಯಗಳನ್ನ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಆದರೆ ಇದು ಅಪಘಾತವಲ್ಲ ಕೊಲೆ ಎಂದು ಕುಟುಂಬಸ್ಥರು ಅನುಮಾನಪಟ್ಟು ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸ್ರು ತನಿಖೆ ನಡೆಸೋದಕ್ಕೆ ಮುಂದಾಗಿದ್ದರು. ಕೊರೊನಾ ಹಿನ್ನಲೆ ತನಿಖೆ ತಡವಾಗಿತ್ತು. ಇದೀಗ ಕೊರೊನಾ ತಗ್ಗಿದ ಹಿನ್ನಲೆ ಪ್ರಕರಣ ಬೆನ್ನಟ್ಟಿದ ಪೊಲೀಸರು ಕಂಠೆಪ್ಪ ಬಾಡಿಗೆ ಇದ್ದ ಮನೆ ಮಾಲೀಕ ಮತ್ತು ಕಂಠೆಪ್ಪನ ಆತ್ಮೀಯ ಸ್ನೇಹಿತ ಯಶವಂತನನ್ನು ಕರೆತಂದು ವಿಚಾರಣೆ ನಡೆಸಿದಾಗ ಕೊಲೆಯ ಅಸಲಿಯತ್ತು ಬಯಲಿಗೆ ಬಂದಿದೆ.
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನ
ಸ್ನೇಹಿತ ಯಶ್ವಂತ ಎಂಬಾತ ಕಷ್ಟದಲ್ಲಿರುವ ಕಾರಣ ಕಂಠೆಪ್ಪ ತನ್ನ ಹೊಲ ಮಾರಾಟ ಮಾಡಿ ಕಷ್ಟದಲ್ಲಿದ್ದ ಯಶ್ವಂತಗೆ ಆರು ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ. ಕೆಲ ದಿನಗಳ ಬಳಿಕ ಹಣವನ್ನು ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದ. ಆದ್ರೆ ಹಣ ಹೊಂದಾಣಿಕೆ ಆಗದ ಕಾರಣ ಕಂಠೆಪ್ಪನ ಕೊಲೆ ಮಾಡೋದಕ್ಕೆ ಯಶ್ವಂತ ಪ್ಲ್ಯಾನ್ ಮಾಡಿದ. ಕೊಲೆಗೂ ಮುನ್ನ ಕಂಠೆಪ್ಪನ ಹೆಸರಿನಲ್ಲಿ 20 ಲಕ್ಷ ರೂಪಾಯಿಯ ಇನ್ಸುರೆನ್ಸ್ ಕೂಡ ಮಾಡಿಸಿದ್ದ. ಕೊಲೆ ಬಳಿಕ ಅಪಘಾತ ಎಂಬಂತೆ ಬಿಂಬಿಸಿ ಆ ಹಣವನ್ನ ಕೂಡ ಲಪಟಾಯಿಸೋಕೆ ಪ್ಲ್ಯಾನ್ ಮಾಡಿದ್ದ. ಆದ್ರೆ ಇನ್ಸುರೆನ್ಸ್ ಹಣ ಬರುವ ಮುಂಚೆಯೆ ಯಶ್ವಂತ, ರಮೇಶ್ ಹಾಗೂ ಯಲ್ಲಪ್ಪ ಮೂರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ದುಡ್ಡಿನ ಮುಂದೆ ಎಲ್ಲಾ ಸಂಬಂಧಗಳು ನಶ್ವರ ಅನ್ನೋ ಮಾತು ಇಲ್ಲಿ ನಿಜವಾಗಿದೆ. ಕಷ್ಟ ಕಾಲದಲ್ಲಿ ಜಮೀನು ಮಾರಿ ಸ್ನೇಹಿತನ ಸಾಲ ತೀರಿಸಿ ನೆರವಾಗಿದ್ದ. ಆದರೆ ಅದೇ ಸ್ನೇಹಿತ ಹಣ ನೀಡುವ ಬದಲಾಗಿ ಕೊಲೆ ಮಾಡಿದ. ಅಷ್ಟೇ ಅಲ್ಲದೆ ಕೊಲೆಯ ಬಳಿಕ ಇನ್ಸುರೆನ್ಸ್ ರೂಪದಲ್ಲಿ ಬರುವ ಹಣವನ್ನು ಕೂಡ ಪಡೆದು ತನ್ನ ಲೈಫ್ ಸೆಟ್ಲ್ ಮಾಡಿಕೊಳ್ಳುವದಕ್ಕೆ ಪ್ಲ್ಯಾನ್ ಮಾಡಿದ್ದ. ಹಂತಕ ಇದೀಗ ಜೈಲಲ್ಲಿ ಕಂಬಿ ಎಣಿಸೋ ಹಾಗಾಗಿದೆ. ಆದ್ರೆ ಸ್ನೇಹಿತನಿಗಾಗಿ ತನ್ನನ್ನೇ ನಂಬಿಕೊಂಡ ಕುಟುಂಬವನ್ನು ಬಿದಿಪಾಲು ಮಾಡಿದ್ದು ದುರಂತ.




