ತರಗತಿಗಳ ಆರಂಭಕ್ಕೆ ಬೆಂಗಳೂರು ವಿ.ವಿ. ಯುದ್ಧೋಪಾದಿ ಸಿದ್ಧತೆ : ಲಸಿಕೆ ಉತ್ತೇಜನಕ್ಕೆ ಕಾರ್ಯಪಡೆ

ಬೆಂಗಳೂರು: ಭೌತಿಕ ತರಗತಿಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಲಸಿಕೆ ನೀಡುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದು ಇಲ್ಲಿಯವರೆಗೆ ಶೇ. 62.61ರಷ್ಟು ಪ್ರಗತಿಯನ್ನು ಸಾಧಿಸಿದೆ. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಕೋವಿಡ್ ಲಸಿಕಾ ಶಿಬಿರಗಳನ್ನು ನಡೆಸುವ ಜೊತೆಗೆ ಲಸಿಕೆ ತೆಗೆದುಕೊಳ್ಳುವಂತೆ ಅವರನ್ನು ವಿಶ್ವವಿದ್ಯಾಲಯ ಉತ್ತೇಜಿಸುತ್ತಿದೆ. ಸರ್ಕಾರವು ಸದ್ಯದಲ್ಲೇ ಭೌತಿಕ ತರಗತಿಗಳನ್ನು ಆರಂಭಿಸುವ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾರ್ಯಪಡೆಯೊಂದನ್ನು ರಚಿಸಿ, ಆ ಮೂಲಕ ಲಸಿಕಾ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಅದರ ಅಧೀನ ಕಾಲೇಜುಗಳಲ್ಲಿ ಕಳೆದ ಏಪ್ರಿಲ್ ತಿಂಗಳಿಂದ ಲಸಿಕಾ ಶಿಬಿರಗಳನ್ನು ನಡೆಸುತ್ತಿದ್ದು, ಇಲ್ಲಿಯವರೆಗೆ ಶೇ. 74.18ರಷ್ಟು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಲಯದ ಶೇ. 66ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 291 ಸಂಯೋಜಿತ ಕಾಲೇಜುಗಳಿದ್ದು, ಅಲ್ಲಿನ ಶೇ. 79.7ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಒಟ್ಟು 107614 ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದು, ಇಲ್ಲಿಯವರೆಗೆ 67387ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಇದರಿಂದಾಗಿ ಶೇ. 62.61 ಪ್ರಗತಿ ಸಾಧಿಸಿದಂತಾಗಿದೆ. ಕೋವಿಡ್ ಸೋಂಕಿಗೊಳಗಾದವರು, ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಜೊತೆಗೆ ಹೊರರಾಜ್ಯ ಹಾಗೂ ದೇಶದ ವಿದ್ಯಾರ್ಥಿಗಳ ಲಸಿಕೆ ಮಾಹಿತಿ ಲಭ್ಯವಾಗುತ್ತಿಲ್ಲ. ಹಾಗೂ ಗ್ರಾಮೀಣ ಭಾಗದಲ್ಲಿರುವ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳಿಗೆ ಲಸಿಕೆ ಲಭ್ಯವಾಗಿಲ್ಲ ಎನ್ನುವುದನ್ನು ಬಿಟ್ಟರೆ ಬೆಂಗಳೂರು ವಿಶ್ವವಿದ್ಯಾಲಯ ಬೇರೆ ವಿಶ್ವವಿದ್ಯಾಲಯಗಳಿಗಿಂತ ಲಸಿಕೆ ನೀಡಿಕೆ ವಿಷಯದಲ್ಲಿ ಮುಂದಿದೆ.
ಪ್ರತಿದಿನ ವ್ಯವಸ್ಥಿತವಾಗಿ ಎಲ್ಲಾ ಕಾಲೇಜುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತಿರುವ ಹಾಗೂ ಕುಲಪತಿಗಳು ಸ್ವತಃ ಕಾರ್ಯಕ್ರಮದಲ್ಲಿ ಆಸಕ್ತಿ ವಹಿಸುತ್ತಿರುವುದರಿಂದ ಈ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ. ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಹಿನ್ನೆಲೆಯಲ್ಲಿ ಈ ಸಾಧನೆ ಮಹತ್ವ ಪಡೆದುಕೊಂಡಿದೆ.
