ಕಥೆ

ಮನೋಜ್ ಮತ್ತು ಗಿಳಿ

ಪುಟ್ಟ ಹುಡುಗ ಮನೋಜ್ ಬಹಳ ಬುದ್ಧಿವಂತ. ಆಟ-ಪಾಠ ಎರಡರಲ್ಲೂ ಸೈ ಅನ್ನಿಸಿಕೊಂಡಿದ್ದ. ಆದರೆ ಸ್ವಲ್ಪ ಹಠದ ಸ್ವಭಾವ. ಒಮ್ಮೆ ಶಾಲೆ ಮುಗಿಸಿ ಅಮ್ಮನ ಕೈ ಹಿಡಿದು ಮನೆಗೆ ಬರುವಾಗ ಅಂಗಡಿಯೊಂದರಲ್ಲಿ ಮಾರಾಟಕ್ಕಿಟ್ಟಿದ್ದ ಪಂಜರದೊಳಗಿನ ಪುಟ್ಟ ಪುಟ್ಟ ಹಕ್ಕಿಗಳನ್ನು ನೋಡಿದ. ಅದು ನನಗೆ ಬೇಕೆಂದು ಹಠ ಹಿಡಿದ. ಅಮ್ಮ ಎಷ್ಟು ಬೇಡವೆಂದರೂ ಕೇಳದೆ ರಸ್ತೆಯ ಮಧ್ಯದಲ್ಲಿ ಬಿದ್ದು ರಂಪ ರಾದ್ಧಾಂತ ಮಾಡಿದ.

ಸಮಾಧಾನಕ್ಕಾಗಿ ಪಂಜರದಲ್ಲಿನ ಒಂದು ಗಿಳಿಯನ್ನು ಕೊಂಡು ಮಗನಿಗೆ ಕೊಟ್ಟಳು. ಮನೋಜ್ ಸಂತೋಷದಿಂದ ಗಿಣಿಯನ್ನು ಮನೆಗೆ ತಂದು ಹಣ್ಣುಗಳನ್ನು ತಿನ್ನಲು ನೀಡಿದ. ಮಾರನೇ ದಿನ ಶಾಲೆಯಿಂದ ಬಂದ ಮನೋಜ್ ಗೆ ಅಮ್ಮ ತಿನ್ನಲು ತಿಂಡಿ ಕೊಟ್ಟು, ನೀನು ಇದನ್ನು ತಿನ್ನುತ್ತಿರು, ನಾನು ಹೊರಗೆ ಹೋಗಿ ಬರುತ್ತೇನೆ ಎಂದು ಮನೆಗೆ ಬೀಗ ಹಾಕಿ ಹೊರನಡೆದಳು.

ಗಿಳಿಯನ್ನು ಮಾತನಾಡಿಸಿ , ಪಾಠ ವನ್ನು ಓದಿ-ಬರೆದು ಆಟಕ್ಕೆ ಹೋಗುವ ಸಮಯವಾದರೂ ಅಮ್ಮ ಮಾತ್ರ ಬರಲಿಲ್ಲ, ಕಿಟಕಿಯ ಬಳಿ ಬಂದು ನಿಂತಾಗ ತನ್ನ ಎಲ್ಲಾ ಸ್ನೇಹಿತರು ಸಂತೋಷದಿಂದ ಆಟವಾಡುತ್ತಿರುವುದನ್ನು ಕಂಡು ಎಲ್ಲರೂ ಆಟವಾಡುತ್ತಿದ್ದಾರೆ, ಆದರೆ ನಾನು ಮಾತ್ರ ಇಲ್ಲಿ ಒಬ್ಬನೇ ಇದ್ದೇನೆ. ಅಮ್ಮ ಎಲ್ಲಿದ್ದೀಯಾ ಬೇಗ ಬಾ ಎಂದು ಜೋರಾಗಿ ಅಳತೊಡಗಿದ.

ಕಿಟಕಿಯ ಬಳಿಯಲ್ಲಿಯೇ ಮನೋಜ್ ಗೆ ಕಾಣದಂತೆ ನಿಂತಿದ್ದ ಅಮ್ಮ ಯಾಕೆ ಮನೋಜ್ ಅಳುತ್ತಿದ್ದೀಯಾ ಎಂದಾಗ ನಾನು ಸ್ನೇಹಿತರೊಂದಿಗೆ ಆಟವಾಡಲು ಹೋಗಬೇಕು ನನಗಿಲ್ಲಿ ಬೇಸರವಾಗುತ್ತಿದೆ ಬೇಗ ಬಂದು ಬಾಗಿಲು ತೆಗಿಯಮ್ಮ ಎಂದನು. ಅವನನ್ನು ಸಮಾಧಾನಪಡಿಸುತ್ತಾ ನೋಡಿದ್ದೀಯ ಕಂದ ಕೇವಲ ಕೆಲವೇ ಗಂಟೆಗಳು ಮಾತ್ರ ಮನೆಯೊಳಗೆ ಇದಿದ್ದಕ್ಕೆ ನೀನು ಇಷ್ಟು ಅಳುತ್ತಿದ್ದೀಯ, ಪಾಪ ಯಾರಿಗೂ ತೊಂದರೆ ಕೊಡದ ಆ ಪಕ್ಷಿಗಳನ್ನು ಹಾರಾಡಲು ಬಿಡದೆ ಕೂಡಿಹಾಕುವುದು ತಪ್ಪಲ್ಲವೇ? ಎಂದಾಗ ಮನೋಜ್ ಗೆ ತನ್ನ ತಪ್ಪಿನ ಅರಿವಾಯಿತು.

ಅಮ್ಮಾ….. ಅಮ್ಮಾ ’ಬೇಗ ಬಾಗಿಲು ತೆಗಿಯಮ್ಮ, ನಾನು ಗಿಳಿಯನ್ನು ಪಂಜರದಿಂದ ಹೊರಬಿಡಬೇಕು, ಆಕಾಶದಲ್ಲಿ ಅದು ಹಾರುವಾಗ ಅದನ್ನು ನೋಡಿ ಸಂತೋಷ ಪಡಬೇಕು ’ ಎಂದಾಗ ಅಮ್ಮ ಸಂತೋಷಗೊಂಡು ಅವಸರದಿಂದ ಬಂದು ಬಾಗಿಲು ತೆಗೆದಳು.

ಮನೋಜ್ ಸಂತೋಷದಿಂದ ಪಂಜರದೊಳಗಿನ ಗಿಳಿಯನ್ನು ಸ್ವತಂತ್ರವಾಗಿ ಹಾರಲು ಬಿಟ್ಟ. ಗಿಳಿ ರೆಕ್ಕೆ ಬಡಿದುಕೊಂಡು ಹಾರಿ ಹೋಯಿತು. ಮನೋಜ್ ಚಪ್ಪಾಳೆ ತಟ್ಟುತ್ತಾ ಗಿಳಿ ಹೋದ ದಾರಿಯನ್ನೇ ನೋಡುತ್ತಿದ್ದ.


ನೀತಿ: ಸ್ವತಂತ್ರವಾದ ಜೀವನ ಸಂತೋಷಕ್ಕೆ ದಾರಿ

Spread the love

Related Articles

Leave a Reply

Your email address will not be published. Required fields are marked *

Back to top button