ಕಥೆ

ರಾಜನ ಬೊಜ್ಜು

ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆ ಅರಸ ಬಹಳ ಹೃದಯವಂತ; ಆದರೆ ಅಷ್ಟೇ ಸೋಮಾರಿ. ತನ್ನ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುವುದಿರಲಿ,ಸ್ವತಃ ಪ್ರಜೆಗಳನ್ನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಅರಸ ಮಾಡುತ್ತಿದದ್ದು ಎರಡೇ ಕೆಲಸ. ಒಂದು ತಿನ್ನುವುದು, ಇನ್ನೊಂದು ಮಲಗುವುದು. ದಿನ ಉರುಳಿದ ಹಾಗೆ ಅವನ ಆರೋಗ್ಯ ಹದಗೆಡತೊಡಗಿತು.

ದೇಹದಲ್ಲಿ ಬೊಜ್ಜು ತುಂಬಿ ಅನಾರೋಗ್ಯ ಪೀಡಿತನಾದ. ಎದ್ದೇಳಲೂ ಆಗದಂತಹ ಪರಿಸ್ಥಿತಿ ಬಂತು. ತನ್ನ ಮಂತ್ರಿಯನ್ನು ಕರೆದು ಅರಮನೆಗೆ ವೈದ್ಯರನ್ನು ಕರೆಸುವಂತೆ ಆಜ್ಞೆ ಮಾಡಿದ. ಆದರೆ ಯಾವ ವೈದ್ಯರು ರಾಜನ ಬಳಿ ಬರೆದಿಲ್ಲ. ಆಗ ಒಬ್ಬ ಪ್ರಜೆ ಬಂದು ರಾಜನ ಬಳಿ ಹೀಗೆ ಹೇಳಿದ; ಪ್ರಭುಗಳೇ ಎರಡು ಕಿಲೋಮೀಟರ್ ದೂರದಲ್ಲಿ ಒಬ್ಬ ಸಾಧು ಇದ್ದಾನೆ.

ಆತ ಬೊಜ್ಜಿನಿಂದ ಬರುವ ಕಾಯಿಲೆಗೆ ಔಷಧಿ ಕೊಡುತ್ತಾನೆ. ಆತ ಕೊಡುವ ಮದ್ದಿನಿಂದ ಬೊಜ್ಜು ಕರಗಿ ಬೇಗನೆ ಕಾಯಿಲೆ ವಾಸಿಯಾಗುತ್ತದೆ ಎಂದ. ಆ ಸಾಧುವನ್ನು ಅರಮನೆಗೆ ಬರಹೇಳು ಎಂದು ಆಜ್ಞೆ ಮಾಡಿದ. ಪ್ರಭುಗಳೇ ಆ ಸಾಧು ಯಾರ ಮನೆಗೂ ಬರಲಾರ. ತಾವೇ ಅಲ್ಲಿಗೆ ದಯಮಾಡಿಸಬೇಕು. ಅದು ಕೂಡ ಯಾವುದೇ ವಾಹನದಲ್ಲಿ ಹೋಗುವಂತಿಲ್ಲ.

ಕಾಲ್ನಡಿಗೆಯಲ್ಲಿ ಹೋಗಬೇಕು ಹಾಗಿದ್ದರೆ ಮಾತ್ರ ಚಿಕಿತ್ಸೆ ಕೊಡುತ್ತಾನೆ, ಎಂದ. ಕೊನೆಗೂ ರಾಜ ಹೇಗೋ ನಡೆದುಕೊಂಡೇ ಸಾಧು ಆಶ್ರಮಕ್ಕೆ ಹೋದ. ಆದರೆ ಅಲ್ಲಿ ಆ ಸಾಧು ಇರಲಿಲ್ಲ. ಮಾರನೇ ದಿನವು ಸಾಧು ಇರಲಿಲ್ಲ. ಮೂರನೇ ದಿನ ನಾಲ್ಕನೇ ದಿನ ಹೀಗೆ ಒಂದು ತಿಂಗಳು ಪೂರ್ತಿ ಎರಡು ಕಿಲೋಮೀಟರ್ ನಡೆದುಕೊಂಡೆ ಆಶ್ರಮಕ್ಕೆ ಹೋಗಿ ಬಂದ ಮಹಾರಾಜ. ಒಂದು ತಿಂಗಳು ಕಳೆದು ಮತ್ತೊಂದು ದಿನ ಮಹಾರಾಜ ಆಶ್ರಮಕ್ಕೆ ಬಂದಾಗ ಸಾಧು ಪ್ರತ್ಯಕ್ಷನಾದ.

ಅಷ್ಟು ಹೊತ್ತಿಗೆ ಮಹಾರಾಜನ ಬೊಜ್ಜು ಬಹಳಷ್ಟು ಕರಗಿಹೋಗಿತ್ತು. ಅರಸನ ಆರೋಗ್ಯ ಸಾಕಷ್ಟು ಸುಧಾರಿಸತೊಡಗಿತ್ತು. ಕೊನೆಯ ದಿನ ಮಹಾರಾಜನನ್ನು ಪರೀಕ್ಷೆ ಮಾಡಿದ ಸಾಧು ಪ್ರಭು ನೀವು ಬರಿ ತಿಂದು ಮಲಗಿದರೆ ಇದೇ ರೀತಿ ತೂಕ ಏರಿ ಬೊಜ್ಜು ತುಂಬಿ ಆರೋಗ್ಯ ಹದಗೆಡುತ್ತದೆ. ಅದಕ್ಕಾಗಿ ದಿನನಿತ್ಯ ಐದು ಕಿಲೋಮೀಟರ್ ನಡೆಯಬೇಕು.

ನೀವು ಬೊಜ್ಜು ಕರಗಿಸಕೊಳ್ಳಬೇಕೆಂದೇ ನಾನು ಒಂದು ತಿಂಗಳು ನೀವು ಬರುವ ಹೊತ್ತಿನಲ್ಲಿ ಮರೆಯಲ್ಲಿ ಇರುತ್ತಿದ್ದೆ. ಆದರೆ ನಿಮ್ಮ ದೈಹಿಕ ಸ್ಥಿತಿಯನ್ನು ಗಮನಿಸುತ್ತಲೇ ಇದ್ದೆ. ಈಗ ನೀವು ಆರಾಮಾಗಿದ್ದೀರಿ. ಪ್ರತಿನಿತ್ಯ ಬರಿ ತಿಂದು ಮಲಗುವುದನ್ನು ಬಿಟ್ಟು ರಾಜ್ಯದ ಜನರ ಹಿತಾಸಕ್ತಿಗಳನ್ನು ಗಮನಿಸಿ.

ಆರೋಗ್ಯದ ಕಡೆ ನಿಗಾ ವಹಿಸಿ. ಅಂದಿನಿಂದ ರಾಜ ಬದಲಾದ. ಪ್ರಜೆಗಳ ಕಷ್ಟ ಸುಖ ವಿಚಾರಿಸತೊಡಗಿದ. ಉತ್ತಮ ಆಡಳಿತ ನೀಡಿದ. ಪ್ರಜೆಗಳೆಲ್ಲರಿಗೂ ಖುಷಿ, ಸಮಾಧಾನವಾಯಿತು.


ನೀತಿ: ಉಂಡು ಮಲಗಿದರೆ ಅನಾರೋಗ್ಯಕ್ಕೆ ಕಟ್ಟಿಟ್ಟ ಬುತ್ತಿ

Related Articles

Leave a Reply

Your email address will not be published. Required fields are marked *

Back to top button