ಕಥೆ

ನಿಯತ್ತಿನ ಪಂಡಿತ

ಒಂದಾನೊಂದು ಕಾಲದಲ್ಲಿ ಸುವರ್ಣಗಿರಿ ಎಂಬ ರಾಜ್ಯದಲ್ಲಿ ಚಂದ್ರ ಸೇನ ಎಂಬ ರಾಜನು ಆಳುತ್ತಿದ್ದನು. ಆತನು ದಾನ-ಧರ್ಮ ಪೂಜೆ-ಪುನಸ್ಕಾರಗಳಿಗೆ ಪ್ರಖ್ಯಾತನಾಗಿದ್ದನು. ನನ್ನ ರಾಜ್ಯದಲ್ಲಿ ಬಡವರೇ ಇರಬಾರದು. ಎಲ್ಲರೂ ಸುಖ ಭಾಗ್ಯದಿಂದ ಕೂಡಿರಬೇಕು ಎಂಬ ಭಾವನೆ ಹೊಂದಿ ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಕಾಣುತ್ತಿದ್ದನು.

ಆಗಾಗ ಸಂಜೆ ವೇಳೆ ಮಂತ್ರಿ ಸುಗುಣನೊಡನೆ ವಾಯುವಿಹಾರಕ್ಕೆ ಹೋಗುತ್ತಿದ್ದನು. ಒಂದು ದಿನ ಹೀಗೆ ಹೋಗುತ್ತಿರುವಾಗ ಸಂಜೆ ಮುಗಿದು ಕತ್ತಲಾಗುತ್ತಾ ಬಂತು. ಮಂತ್ರಿಗಳೇ ಬೇಗ ರಾಜಧಾನಿ ಸೇರೋಣ. ಕುದುರೆಯನ್ನು ವೇಗವಾಗಿ ಓಡಿಸಿ ಎಂದು ಸೂಚಿಸಿದ. ಕೊಂಚ ದೂರ ಹೋಗುವುದರಲ್ಲಿ ರಾಜನು ಕುದುರೆಯನ್ನು ನಿಲ್ಲಿಸಿ ’ಮಂತ್ರಿಗಳೇ ಕತ್ತಲಾಗುತ್ತಾ ಬಂದಿದ್ದರು ಕುಟೀರದ ಮುಂದೆ ತೋಟದ ಕೆಲಸ ಮಾಡುತ್ತಿರುವ ಆತ ಯಾರು? ತುಂಡು ಬಟ್ಟೆ ಉಟ್ಟು ಚಳಿಯನ್ನು ಲೆಕ್ಕಿಸದ ಮಹಾಪುರುಷ ಯಾರು? ಎಂದು ಕೇಳಿದ.

ಆಗ ಮಂತ್ರಿಯು ಆತ ಶೇಷ ಶರ್ಮನೆಂಬ ಪ್ರಖಾಂಡ ಪಂಡಿತ, ಶ್ರಮ ಜೀವಿ ಎಂದರು. ನಮ್ಮ ರಾಜ್ಯದಲ್ಲಿ ಆತ ಏಕೆ? ಇಷ್ಟು ಕಷ್ಟ ಪಡಬೇಕು? ಅರಮನೆಗೆ ಕರೆಸಿ ಬೇಕಾದ್ದನ್ನು ಕೊಡಿ ಎಂದನು. ಕ್ಷಮಿಸಿ ಮಹಾರಾಜ ಆತ ಆತ್ಮ ಗೌರವಿ ಯಾರಿಂದಲು ಏನು ಬೇಡುವುದಿಲ್ಲ. ಸಹಾಯವನ್ನು ಬಯಸುವುದಿಲ್ಲ. ಹೆಂಡತಿ ಮಕ್ಕಳನ್ನು ಪೋಷಿಸುತ್ತಾನೆ ಎಂದು ಉತ್ತರಿಸಿದನು ಮಂತ್ರಿ ಸರಿ ನಡೆಯಿರಿ ಇದಕ್ಕೆ ನಾವೇ ಒಂದು ಉಪಾಯ ಮಾಡೋಣ ಎಂದು ಇಬ್ಬರೂ ಹೊರಟರು.

ಮಾರನೆಯದಿನ ಶರ್ಮನ ತೋಟದಲ್ಲಿ ಒಂದು ಚೀಲ ಸಿಕ್ಕಿತು. ಅದರ ತುಂಬಾ ಚಿನ್ನದ ನಾಣ್ಯಗಳಿದ್ದವು. ಕೂಡಲೇ ಅದನ್ನು ಕೈಯಲ್ಲಿ ಹಿಡಿದು ರಾಜ ದರ್ಬಾರಿಗೆ ನಡೆದ. ಮಹಾಪ್ರಭು ನನ್ನ ತೋಟದಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿದೆ ಯಾರದೋ ಏನು ವಿಚಾರಣೆ ನಡೆಸಿ ಅವರಿಗೆ ತಲುಪಿಸಿ ಎಂದು ಹೊರಡಲನುವಾದ. ಆಗ ರಾಜನು ಯಾರದೇ ಆಗಲೇ ನಿಮ್ಮ ತೋಟದಲ್ಲಿ ಸಿಕ್ಕಿದೆ, ನೀವೇ ಅನುಭವಿಸಿ ಎಂದನು.

ಆಗ ಶರ್ಮಾ ಕ್ಷಮಿಸಿ ಮಹಾಪ್ರಭು ನಿತ್ಯ ನನ್ನ ತೋಟಕ್ಕೆ ಅನೇಕ ಹಕ್ಕಿಗಳು ಬರುತ್ತವೆ, ನವಿಲು, ಜಿಂಕೆಗಳು ಬರುತ್ತವೆ ಅವು ನಮ್ಮವು ಎಂದರೆ ದ್ರೋಹವಾಗುವುದಿಲ್ಲವೇ..? ಅನೇಕ ಮಂದಿ ದಾರಿಹೋಕರು ನಮ್ಮ ತೋಟದಲ್ಲಿ ಓಡಾಡುತ್ತಾರೆ. ಅವರು ನಮ್ಮವರು ಎಂದುಕೊಳ್ಳಲು ಸಾಧ್ಯವೇ? ಎಂದು ಹೇಳಿದ. ಈ ನಾಣ್ಯಗಳು ಯಾರಿಗೆ ಸೇರಿವೆಯೋ ಅವರಿಗೆ ತಲುಪಿಸಿ ನಮ್ಮ ಹಣೆಯಲ್ಲಿ ಬರೆದಷ್ಟು ನಮಗೆ ಸಿಕ್ಕಿದೆ ಎಂದು ಅಲ್ಲಿಂದ ಹೊರಟು ಹೋದ.


ನೀತಿ: ನಮ್ಮದಲ್ಲದ್ದಕ್ಕೆ ನಾವೇ ಆಸೆ ಪಡಬಾರದು. ಪರರ ಸ್ವತ್ತು ಪಾಷಾಣಕ್ಕೆ ಸಮ

Spread the love

Related Articles

Leave a Reply

Your email address will not be published. Required fields are marked *

Back to top button