19 ಶಸ್ತ್ರಚಿಕಿತ್ಸೆ ಪಡೆದ ನಿರಂಜನ್ ಟೋಕಿಯೋ ಒಲಿಂಪಿಕ್ಸ್ಗೆ

ಸೋಮಶೇಖರ್ ಪಡುಕರೆ
ಹುಟ್ಟುವಾಗಲೇ ಸ್ಪೈನಾ ಬಿಫಿಡಾ ಎಂಬ ರೋಗಕ್ಕೆ ತುತ್ತಾಗಿ, 19 ಬಾರಿ ಶಸ್ತ್ರ ಚಿಕಿತ್ಸೆಗೆ ತುತ್ತಾಗಿರುವ ಕರ್ನಾಟಕದ ಚಿನ್ನದ ಮೀನು ಪ್ಯಾರಾ ಈಜುಗಾರ ನಿಜರಂಜನ್ ಮುಕುಂದನ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಇದುವರೆಗೂ ಅಂತಾರಾಷ್ಟ್ರೀಯ ಈಜಿನಲ್ಲಿ 65ಕ್ಕೂ ಹೆಚ್ಚು ದಾಖಲೆಗಳನ್ನು ಬರೆದಿರುವ ನಿರಂಜನ್ ಜೂನಿಯರ್ ವಿಶ್ವಕಪ್ ನಲ್ಲಿ 10 ಪದಕಗಳನ್ನು ಗೆದ್ದು ದಾಖಲೆ ಬರೆದವರು. ಮೂರು ತಿಂಗಳ ಹಿಂದೆ ಕೊರೋನಾದಿಂದ ಬಳಲುತ್ತಿದ್ದ ನಿರಂಜನ್ ಈಗ ಚೇತರಿಸಿಕೊಂಡಿದ್ದಾರೆ. ತನ್ನ ಬದುಕಿನಲ್ಲಿ ಸ್ಫೂರ್ತಿಯ ಚಿಲುಮೆಯಾಗಿದ್ದ ಅಜ್ಜಿಯು ಕೊರೋನಾ ಮಾರಿಗೆ ಬಲಿಯಾದ ನೋವು ಇನ್ನೊಂದೆಡೆ ನಿರಂಜನ್ ಅವರನ್ನು ಕಾಡುತ್ತಿದೆ. ಇವುಗಳ ನಡುವೆ ತಮ್ಮ ಉಸಿರಾಗಿರುವ ಈಜಿನಲ್ಲಿ ಯಶಸ್ಸಿನ ಹಾದಿಯನ್ನು ತುಳಿಯುತ್ತಲೇ ಇದ್ದಾರೆ. ಭಾನುವಾರ ರಾತ್ರಿ 50 ಮೀ. ಬಟರ್ ಫ್ಲೈ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ನಿರಂಜನ್ ಗೆ ಒಲಿಯಿತು.

ಬಸವನಗುಡಿಯ ಈಜುಕೊಳದಲ್ಲಿ ಗುರು ಜಾನ್ ಕ್ರಿಸ್ಟೋಫರ್ ಅವರಲ್ಲಿ ತರಬೇತಿ ಪಡೆಯುತ್ತಿರುವ ನಿರಂಜನ್, “ಹೆತ್ತವರ ಆಶೀರ್ವಾದ, ಗುರುಗಳ ಕೃಪೆ ಮತ್ತು ನಿರಂತರ ಅಭ್ಯಾಸದಿಂದಾಗಿ ಈ ಯಶಸ್ಸು ಸಿಕ್ಕಿದೆ,” ಎಂದಿದ್ದಾರೆ. ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸ್ಪರ್ಧೆ ನಡೆಯುತ್ತಿಲ್ಲ ಹಿಂದಿನ ಸಾಧನೆಗಳನ್ನು ಪರಿಗಣಿಸಿ, ಇತ್ತೀಚಿನ ರಾಷ್ಟ್ರೀಯ ಈಜಿನಲ್ಲಿ ತೋರಿದ ಸಾಧನೆಯನ್ನು ಆಧರಿಸಿ ಪ್ಯಾರಾಲಿಂಪಿಕ್ಸ್ ಆಯ್ಕೆ ಟ್ರಯಲ್ಸ್ ನಡೆಯುತ್ತಿದೆ.
ಸ್ಪೈನಾ ಬಿಫಿಡಾದಿಂದಾಗಿ ತನ್ನ ಬದುಕೇ ಕೊನೆಗೊಂಡಿತು ಎಂದು ನಿರಾಸೆಯಿಂದ ಕುಳಿತಿದ್ದ ನಿರಜನ್ ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಈಜಿನಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು. ಅದರಂತೆ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳು ಈಜುಕೊಳಕ್ಕೆ ಇಳಿದ ನಿರಂಜನ್ ದಾಖಲೆಗಳ ಮೇಲೆ ದಾಖಲೆ ಬರೆದು ಈಗ ಪ್ಯಾರಾಲಿಂಪಿಕ್ಸ್ ನ ಕದ ತಟ್ಟಿದ್ದಾರೆ.
ವಿಶ್ವ ಜೂನಿಯನ್ ಚಾಂಪಿಯನ್:
ನೆದರ್ಲೆಂಡ್ಸ್ ನ ಸ್ಟಾಡ್ಸ್ ಕೆನಲ್ ನಲ್ಲಿ ನಡೆದ ವಿಶ್ವ ಜೂನಿಯನ್ ಗೇಮ್ಸ್ ನಲ್ಲಿ ನಿರಂಜನ್ 7 ಚಿನ್ನ ಮತ್ತು 3 ಬೆಳ್ಳಿ ಪದಕ ಗೆದ್ದು ದಾಖಲೆ ಬರೆದರು. ಈ ಚಾಂಪಿಯನ್ಷಿಪ್ ನಲ್ಲಿ ನಿರಂಜನ್ ಜೂನಿಯನ್ ವಿಶ್ವ ಚಾಂಪಿಯನ್ ಆಗಿ ಮೂಡಿ ಬಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಏಕಲವ್ಯ ಕ್ರೀಡಾ ಗೌರವ ಮತ್ತು ಕೇಂದ್ರ ಸರಕಾರದಿಂದ ಉತ್ತಮ ಕ್ರೀಡಾಪಟು ಪ್ರಶಸ್ತಿಗೆ ನಿರಂಜನ್ ಭಾಜನರಾಗಿದ್ದಾರೆ.
ಮಗನ ಸಾಧನೆಯ ಬಗ್ಗೆ ಮಾತನಾಡಿದ ಮುಕುಂದನ್, “ಅವನ ಮೇಲೆ ದೇವರ ದಯೆ ಇದೆ. ಆತ ದೇವರ ಕೊಡುಗೆ ಎಂದೇ ನಂಬಿದವನು ನಾನು. ಆದರೆ ಆತ ಪಟ್ಟ ಕಷ್ಟಗಳನ್ನು ಕಂಡಾಗ ನನಗೆ ಮಾತೇ ಬರುತ್ತಿಲ್ಲ. ದೇವರು ಯಾಕೆ ಹೀಗೆ ಮಾಡಿದ ಎಂದು ಯೋಚಿಸುತ್ತೇನೆ. ಆತನ ನಿಜವಾದ ಮನೆ ಈಜುಕೊಳ. ದೇವರು ಅಲ್ಲೇ ಆತನಿಗೆ ಎಲ್ಲವನ್ನೂ ನೀಡಿದ್ದಾನೆ. ಒಲಿಂಪಿಕ್ಸ್ ಅತನ ಕನಸಾಗಿತ್ತು. ದೇವರು ಆ ಕನಸನ್ನು ನನಸು ಮಾಡಿದ್ದಾನೆ. ಟೋಕಿಯೋದಲ್ಲೂ ಅವನ ಪಾಲಿಗೆ ಯಶಸ್ಸು ಸಿಗಲಿ ಎಂಬುದೇ ನಮ್ಮ ಹಾರೈಕೆ,” ಎಂದರು.




