ದೀಕ್ಷಾ ದಾಗರ್ ಗೆ ಒಲಿಂಪಿಕ್ಸ್ ಅವಕಾಶ

ಹೊಸದಿಲ್ಲಿ : ಅದೃಷ್ಟ ಹೇಗೆಲ್ಲ ಒಲಿದು ಬರುತ್ತದೆ ನೋಡಿ. ಟೋಕಿಯೋ ಒಲಿಂಪಿಕ್ಸ್ ಆರಂಭಗೊಂಡು ಆರು ದಿನಗಳೇ ಕಳೆದಿವೆ. ಆದರೆ ಭಾರತದ ಕ್ರೀಡಾಪಟುವೊಬ್ಬರಿಗೆ ಇಂದು ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಗಾಲ್ಫರ್ ದೀಕ್ಷಾ ದಾಗರ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅಚ್ಚರಿಯ ಅವಕಾಶ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ಗಾಲ್ಫರ್ ಪೌಲಾ ರೆಟೋ ಮಹಿಳಾ ವಿಭಾಗದಲ್ಲಿ ಅರ್ಹತೆ ಪಡೆದಿದ್ದರು. ಆದರೆ ಅವರು ಟೋಕಿಯೋ ದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬುಧವಾರ ಪ್ರಕಟಿಸಿದರು. ಅವರ ಸ್ಥಾನಕ್ಕೆ ಆಸ್ಟ್ರಿಯಾದ ಸರ್ಹಾ ಶೋಬೆರ್ ಸ್ಪರ್ಧಿಸಬೇಕಿತ್ತು. ಆದರೆ ಆ ದೇಶ ಪುನರ್ ಅವಕಾಶಕ್ಕೆ ಒಪ್ಪಲಿಲ್ಲ. ಇದರಿಂದಾಗಿ ಅಂತಾರಾಷ್ಟ್ರೀಯ ಗಾಲ್ಫ್ ಯೂನಿಯನ್ ದೀಕ್ಷಾಗೆ ಅವಕಾಶ ನೀಡಲು ಸೂಚಿಸಿದೆ.
ವಿಶ್ವ ಆಹ್ವಾನಿತ ಟೂರ್ನಿಯಲ್ಲಿ ಆಡಲು ಉತ್ತರ ಐರ್ಲೆಂಡ್ ಗೆ ಪ್ರಯಾಣಿಸಬೇಕಾಗಿದ್ದ ದೀಕ್ಷಾ ಈಗ ಟೋಕಿಯೋ ಗೆ ಪ್ರಯಾಣಿಸಬೇಕಾಗಿದೆ. 21 ವರ್ಷದ ದೀಕ್ಷಾಗೆ ಶ್ರವಣ ದೋಷವಿದ್ದು, ಕಿವಿ ಕೇಳೊಲ್ಲ. 2017ರಲ್ಲಿ ಮೊದಲ ಬಾರಿಗೆ ನಡೆದ ಡೆಫ್ ಒಲಿಂಪಿಕ್ಸ್ ನಲ್ಲಿ ದೀಕ್ಷಾ ಬೆಳ್ಳಿ ಗೆದ್ದಿದ್ದರು. ಅವರು ಭಾರತದ ನಂ1 ಮಹಿಳಾ ಗಾಲ್ಫರ್ ಕೂಡ ಹೌದು.
