ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ಶಾಸಕರಲ್ಲಿ ಯಾರಿಗೆ ಮಂತ್ರಿಗಿರಿ?

ಕಿರುಗುಂದ ರಫೀಕ್

ಚಿಕ್ಕಮಗಳೂರು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಾದ ಕಡೂರು, ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಸಿ.ಟಿ ರವಿ, ಎಂ.ಪಿ ಕುಮಾರಸ್ವಾಮಿ, ಬೆಳ್ಳಿಪ್ರಕಾಶ್‌, ಸುರೇಶ್.

ಇವರಲ್ಲಿ ಸಿ.ಟಿ ರವಿ ಬಿಜೆಪಿಯ ಮುಂಚೂಣಿ ನಾಯಕರಾಗಿ ಬೆಳೆದಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಗುರುತಿಸಿಕೊಂಡಿದ್ದರು. ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಕ್ಕಿದ್ದರಿಂದ ಬಿಜೆಪಿಯ ʼಓರ್ವ ವ್ಯಕ್ತಿ ಒಂದೇ ಹುದ್ದೆʼ ಎಂಬ ಕಾರಣ ಹೇಳಿ ಕಳೆದ ನವೆಂಬರ್ 2ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದಿದ್ದರು. ಆಗಲೇ ಸಿ ಟಿ ರವಿ ರಾಷ್ಟ್ರಮಟ್ಟದಲ್ಲಿ ಏನೋ ತಂತ್ರ ಹೂಡಿದ್ದಾರೆ ಎಂಬ ಗುಮಾನಿ ಉಂಟಾಗಿತ್ತು.

ಈಗಂತೂ ಸಿ ಟಿ ರವಿ ದೊಡ್ಡ ಹುದ್ದೆಯ ಆಕಾಂಕ್ಷಿ ಎಂಬುದು ಸಾಬೀತಾಗಿದೆ. ಬಹುಶಃ ಡಿಸಿಎಂ ಸ್ಥಾನ ಕೊಟ್ಟರೂ ಸಿ.ಟಿ.ರವಿ ಒಪ್ಪಿಕೊಳ್ಳುವರೇ ಎಂಬ ಪ್ರಶ್ನೆಯಿದೆ.

ಉಳಿದ ಮೂವರು ಶಾಸಕರೂ ಯಡಿಯೂರಪ್ಪ ನಿಷ್ಠರಾಗಿದ್ದಾರೆ. ಪ್ರಬಲ ಆಕಾಂಕ್ಷಿಯಾಗಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ರೇಸ್‌ ನಲ್ಲಿದ್ದಾರೆ. ಈಗಾಗಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ತನಗೂ ಸ್ಥಾನ ನೀಡುವಂತೆ ಕೋರಿದ್ದಾರೆ.

ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಮೂರು ಬಾರಿ ಗೆದ್ದಿರುವ ಎಂ.ಪಿ.ಕುಮಾರಸ್ವಾಮಿಗೆ ಇದುವರೆಗೂ ಸೂಕ್ತ ಸ್ಥಾನಮಾನ ಸಿಗದೆ ಕೊನೇ ಸಾಲಿನಲ್ಲೇ ಉಳಿದಿದ್ದಾರೆ. ಕಳೆದ ಬಾರಿ ಸಚಿವ ಸ್ಥಾನ ಸಿಗಬಹುದೆಂದು ಅಪಾರ ನಿರೀಕ್ಷೆ ಹೊಂದಿದ್ದರು. ನಂತರ ಎಂ.ಪಿ.ಕುಮಾರಸ್ವಾಮಿಗೆ ಯಾವುದೋ ಮಂಡಳಿಯೊಂದರ ಅಧ್ಯಕ್ಷ ಸ್ಥಾನವನ್ನು ಕೊಡಲು ವರಿಷ್ಠರು ಮುಂದಾದಾಗ ಅದನ್ನು ತಿರಸ್ಕರಿಸಿದ್ದರು. ನಾಮಕಾವಾಸ್ತೆ ಸ್ಥಾನ ಬೇಡ. ಕೊಟ್ಟರೆ ಸಚಿವ ಸ್ಥಾನ ಕೊಡಿ. ಇಲ್ಲವಾದರೆ ಶಾಸಕನಾಗಿಯೇ ಇರುತ್ತೇನೆ ಎಂದು ಹೇಳಿದ್ದರು.

ಇನ್ನು ಕಡೂರು ಶಾಸಕ ಬೆಳ್ಳಿಪ್ರಕಾಶ್‌ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ. ತರೀಕೆರೆ ಶಾಸಕ ಸುರೇಶ್‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ. ಈ ಹುದ್ದೆಗಳೇನಿದ್ದರೂ ಜಿಲ್ಲಾಮಟ್ಟಕ್ಕೆ ಸೀಮಿತ. ಸಚಿವರ ಪಟ್ಟ ಸಿಕ್ಕರೆ ರಾಜ್ಯದಲ್ಲಿ ಘನತೆ, ಗೌರವ ಲಭಿಸುತ್ತದೆ. ರಾಜಕೀಯವಾಗಿ ಮತ್ತಷ್ಟು ಬೆಳೆಯಲು ಅವಕಾಶವಾಗುತ್ತದೆ. ಈ ಕಾರಣಕ್ಕೆ ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳೇ ಆಗಿದ್ದಾರೆ.

ಮೂವರೂ ಸಹ ಯಡಿಯೂರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡು ಬೆಳೆದವರು. ಇವರಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಈ ಬಾರಿ ಮಂತ್ರಿಸ್ಥಾನ ದೊರಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button