ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಲಸಿಕೆ ಒದಗಿಸಲು ಪ್ರಧಾನಿಗೆ ಬಿಎಸ್ವೈ ಮನವಿ

ಬೆಂಗಳೂರು: ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಕೋವಿಡ್ 19 ಪರಿಸ್ಥಿತಿ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ಮಾತನಾಡಿ, ಯುರೋಪ್ ಮತ್ತಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಮೂರನೇ ಅಲೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದು, 1900ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಸುಮಾರು 400ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ. 1.42 ರಷ್ಟಿದ್ದು, ಮರಣ ಪ್ರಮಾಣ ಶೇ. 1.25ಕ್ಕೆ ಇಳಿದಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ರಾಜ್ಯದಲ್ಲಿ ಈ ವರೆಗೆ 2.62 ಕೋಟಿ ಲಸಿಕೆ ನೀಡಲಾಗಿದ್ದು, ಪ್ರತಿ ದಿನ 5 ಲಕ್ಷ ಡೋಸ್ಗಳಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದರು.
ಕೋವಿಡ್ ಪಾಸಿಟಿವಿಟಿ ದರ, ಪ್ರಕರಣಗಳ ಸಂಖ್ಯೆ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಆಧರಿಸಿ, ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಖಾತರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.
