ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯರ ಕಳ್ಳಾಟ : ರೋಗಿಗಳ ಪರದಾಟ

ರಾಮನಗರ : ಚನ್ನಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿದಿನ ಚಿಕಿತ್ಸೆಗಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವೈದ್ಯರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಇದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಾಸಕರಾಗಿರುವ ಕ್ಷೇತ್ರದ ಸಾರ್ವಜನಿಕ ಆಸ್ಪತ್ರೆಯಾಗಿದ್ದು, ಪ್ರತಿದಿನ ನೂರಾರು ಸಂಖ್ಯೆ ಯಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರೂ ಕೂಡ ಸಮಯಕ್ಕೆ ಸರಿಯಾಗಿ ಯಾವ ವೈದ್ಯರು ಕೂಡ ರೋಗಿಗಳ ಕೈ ಮಾತ್ರ ಸಿಗುತ್ತಿಲ್ಲ.
ಹೆಸರಿಗೆ ಮಾತ್ರ ಈ ಆಸ್ಪತ್ರೆಯಲ್ಲಿ 14 ಜನ ವೈದ್ಯರು ಇದ್ದು, ಸಮಯಕ್ಕೆ ಸರಿಯಾಗಿ ಯಾವೊಬ್ಬ ವೈದ್ಯರು ಬರದೆ ಪ್ರತಿದಿನ ರೋಗಿಗಳು ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ದುರಂತವೇ ಸರಿಯಾಗಿದೆ.
ಈಗಾಗಲೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ ಇತ್ತ ಜ್ವರ, ಕೆಮ್ಮು, ನಗಡಿ ಪ್ರಕರಣ ಸಂಖ್ಯೆಯ ರೋಗಿಗಳು ಕೂಡ ಹೆಚ್ಚಾಗಿದ್ದು, ಪ್ರತಿದಿನ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿತುಳುತ್ತಿದ್ದು, ರೋಗಿಗಳನ್ನ ನೋಡಲು ಮಾತ್ರ ವೈದ್ಯರ ಕೊರತೆ ಎದ್ದು ಕಾಣುತ್ತಿದೆ.
ಅದರಲ್ಲೂ ಮಧ್ಯಾಹ್ನ 1.30 ರಿಂದ 3.00 ರವರೆಗೆ ಈ ಆಸ್ಪತ್ರೆಯಲ್ಲಿ ವೈದ್ಯರನ್ನ ಹುಡುಕಾಡುವ ಪರಿಸ್ಥಿತಿ ಇದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಪ್ರಾಣಸಂಕಟ ಅನುಭವಿಸುವಂತಾಗಿದೆ. ವೈದ್ಯರು ಸರಿಯಾದ ಸಮಯಕ್ಕೆ ಬಾರದಿರುವುದಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ವೈದ್ಯ ವಿಜಯನರಸಿಂಹ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕರ ಆರೋಪವಾಗಿದೆ.
ಒಂದೆಡೆ ಕೊರೋನಾ ಮೂರನೇ ಅಲೆ ಉಲ್ಬಣವಾಗಿದ್ದು, ಮತ್ತೊಂದೆಡೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗದೆ ದಿನನಿತ್ಯ ಪರದಾಡುತ್ತಿರುವ ದೃಶ್ಯ ಹಾಗೂ ನೆಲದ ಮೇಲೆ ಕುಳಿತು ಜನರು ನರಳುತ್ತಿರುವ ದೃಶ್ಯಗಳು ಬಂದ ರೋಗಿಗಳಿಗೆ ಕೂರಲು ಆಸನದ ವ್ಯವಸ್ಥೆಯೂ ಇಲ್ಲದಿರುವುದು ಮಾತ್ರ ಶೋಚನೀಯವಾಗಿದೆ.
ಈ ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವೈದ್ಯರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವಂತೆ ಸೂಕ್ತ ಕ್ರಮ ಜರುಗಿಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.



