ನಿಕ್ಕಿ ಗಲ್ರಾನಿ ಮನೆಯಲ್ಲಿ ಕಳ್ಳತನ: ತಿರುಪತಿಯಲ್ಲಿ ಸಿಕ್ಕಿಬಿದ್ದ ಕಳ್ಳ

ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಸಹ ನಟಿ. ಸಂಜನಾ ಸ್ಯಾಂಡಲ್ವುಡ್ನಲ್ಲಿ ಹೆಸ್ರು ಮಾಡಿದ್ರೆ ನಿಕ್ಕಿ ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಿಕ್ಕಿ ಚೆನ್ನೈನಲ್ಲಿ ವಾಸವಿದ್ದು ಇದೀಗ ತಮ್ಮ ಮನೆಯ ಕೆಲಸದ ಹುಡುಗನಿಂದಲೇ ತೊಂದರೆಗೀಡಾಗಿದ್ದಾರೆ.
ನಿಕ್ಕಿ ಗಲ್ರಾನಿ ವಾಸವಿರೋ ಚೆನ್ನೈನ ಅಪಾರ್ಟ್ಮೆಂಟ್ಗೆ ಕೆಲವು ದಿನಗಳ ಹಿಂದೆ ಧನುಷ್ ಎಂಬ 19-20 ವರ್ಷದ ಯುವಕ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದ್ರೆ ಮನೆಯಲ್ಲಿ ನಿಕ್ಕಿ ಇಲ್ಲದ ಸಂದರ್ಭ ನೋಡಿಕೊಂಡು ಮನೆಯಲ್ಲಿ ಸಿಕ್ಕ ಬೆಲೆ ಬಾಳುವ ವಸ್ತು, ನಿಕ್ಕಿಯ ಬೆಲೆ ಬಾಳುವ ಉಡುಪುಗಳನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ.
ಘಟನೆ ಕುರುತು ನಿಕ್ಕಿ ಗಲ್ರಾನಿ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಧನುಶ್ನನ್ನು ತಿರುಪತಿಯಲ್ಲಿ ಬಂಧಿಸಿದ್ದಾರೆ. ತಿರುಪತಿಯಲ್ಲಿರುವ ತನ್ನ ಗೆಳೆಯನ ಮನೆಯಲ್ಲಿ ಆಸರೆ ಪಡೆದಿದ್ದ ಧನುಷ್, ಕಳ್ಳತನ ಮಾಡಿದ ವಸ್ತುಗಳನ್ನು ಮಾರಟ ಮಾಡಲು ಯೋಜನೆ ಹಾಕಿದ್ದ ಎನ್ನಲಾಗಿದೆ.
ಜನವರಿ 11ರಂದು ಚೆನ್ನೈನ ಅನ್ನಾಸಲೈ ಪೊಲೀಸರಿಗೆ ನಿಕ್ಕಿ ಗಲ್ರಾನಿ ದೂರು ನೀಡಿದ್ದರು. ನನ್ನ ದುಬಾರಿ ಕ್ಯಾಮೆರಾ ಹಾಗೂ ಉಡುಪುಗಳು ಕಾಣೆಯಾಗಿವೆ. ಮನೆ ಕೆಲಸದ ಹುಡುಗ ಧನುಷ್ ಕದ್ದಿರುವ ಶಂಕೆಯಿದೆ. ಕ್ಯಾಮೆರಾ ಕಾಣೆಯಾದ ದಿನದಿಂದ ಧನುಷ್ ಕೆಲಸಕ್ಕೆ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ನಿಕ್ಕಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ತಮ್ಮ ದುಬಾರಿ ಕ್ಯಾಮೆರಾ ಹಾಗೂ ಬಟ್ಟೆಗಳನ್ನ ವಾಪಸ್ ಸಿಕ್ಕಿರುವ ಬಗ್ಗೆ ಸಮಾಧಾನಗೊಂಡಿರುವ ನಟಿ ತಾವು ನೀಡಿದ ದೂರನ್ನ ಹಿಂಪಡೆಯಲು ನಿರ್ಧರಿಸಿದ್ದಾರಂತೆ. ಅಲ್ಲದೆ ಮನೆ ಕೆಲಸದ ಹುಡುಗ ಧನುಷ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಂತೆ ಮನವಿ ಮಾಡಿಕೊಂಡಿದ್ದಾರಂತೆ.




