ಕರ್ನಾಟಕ ಬಂದ್ ಮಾಡುವುದರಿಂದ ಏನು ಪ್ರಯೋಜನವಾಗಲಿದೆ: ಕುಮಾರಸ್ವಾಮಿ ಪ್ರಶ್ನೆ
ರಾಮನಗರ: ಬಂದ್ ಮಾಡುವುದರಿಂದ ಅನುಕೂಲ ಯಾರಿಗೆ ಆಗಲಿದೆ. ಅನಾನುಕೂಲ ಯಾರಿಗೆ ಅನ್ನೋವ ಪ್ರಶ್ನೆ ಉದ್ಭವಿಸಿದೆ. ನಮ್ಮ ರಾಜ್ಯದಲ್ಲಿ ಬಂದ್ ಕರೆ ನೀಡಿದ್ದಾರೆ. ಇದರಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ಸಮಸ್ಯೆ ಆಗೋದು ಕನ್ನಡಿಗರಿಗೆ ಅಲ್ಲವೇ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ಕ್ರಮಕ್ಕೆ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.
ಎಂಇಎಸ್ ಕಠಿಣವಾದ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ. ಬಂದ್ ಘೋಷಣೆಯಿಂದ ನಮ್ಮವರಿಗೆ ತೊಂದರೆಯಾಗಲಿದೆ. ಬಂದ್ ನಿಂದ ರಾಜ್ಯದ ಜನರಿಗೆ ನಷ್ಟವಾಗಲಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸವರಿಗೆ ಆಗುವ ಪರಿಣಾಮದ ಬಗ್ಗೆ ಬಂದ್ ಕರೆ ನೀಡಿದವರು ಯೋಚಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಬಂದ್ ನಿಂದ ಕನ್ನಡಿಗರಿಗೆ ಅನನುಕೂಲವಾಗಲಿದೆ. ಹೋರಾಟಗಾರರು ಸರ್ಕಾರದ ಒತ್ತಡ ಹೇರಬೇಕು. ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಂದ್ ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಹೇಳಿದರು.
ಕಲಾಪ ವ್ಯರ್ಥ ಮಾಡಿದ್ದಾರೆ :
ಬೆಳಗಾವಿ ವಿಧಾನಸಭಾ ಕಲಾಪ ಬಗ್ಗೆ ಪ್ರತಿಕ್ರಿಸಿದ ಕುಮಾರಸ್ವಾಮಿ, ಬೆಳಗಾವಿಯಲ್ಲಿ ನಡೆದ ಸದನ ಕಲಾಪವನ್ನ ಸಂಪೂರ್ಣ ವ್ಯರ್ಥ ಮಾಡಿದ್ದಾರೆ. ಮೊದಲ 5 ದಿನ ಸಂಪೂರ್ಣ ವ್ಯರ್ಥವಾಗಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿಲ್ಲ. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆಯೂ ಚರ್ಚಿಮಾಡಿಲ್ಲ. ಸಂಡೂರು ತಹಶೀಲ್ದಾರ್, ಬೈರತಿ ಬಸವರಾಜ್ ಬಗ್ಗೆ ವೃಥಾ ಚರ್ಚೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಯಾವುದಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಿತ್ತೋ ಅದಕ್ಕೆ ಪ್ರಾರಂಭಿಕ ಹಂತದಲ್ಲಿ ನೀಡಿಲ್ಲ. ಕೊನೆ ಎರಡು ದಿನವೆಂದು ಆಗ ಕೂಡ ಸರಿಯಾದ ಚರ್ಚೆ ನಡೆಯಲಿಲ್ಲವೆಂದರು.




