Aditi Ashok: ಗಾಲ್ಫ್ ನಲ್ಲಿ ಅದಿತಿಗೆ ಅವರ ತಾಯಿಯೇ ಕ್ಯಾಡಿ!!

ಸೋಮಶೇಖರ್ ಪಡುಕರೆ
ಬೆಂಗಳೂರು: ಯಾವುದೇ ಸ್ಪರ್ಧೆ ಇರಲಿ ಅಮ್ಮ ಜೊತೆಯಲ್ಲಿದ್ದರೆ ಆ ಸ್ಪರ್ಧೆಯಲ್ಲಿ ಸೋಲಿನ ಪದ ನುಸುಳದು. ಟೋಕಿಯೋ ಒಲಿಂಪಿಕ್ಸ್ ಶುಕ್ರವಾರದವರೆಗೂ ಎರಡನೇ ಸ್ಥಾನದಲ್ಲಿದ್ದ ಭಾರತದ ಗಾಲ್ಫರ್ ಕರ್ನಾಟಕದ ಅದಿತಿ ಅಶೋಕ್ ಅವರಿಗೆ ಕ್ಯಾಡಿಯಲ್ಲಿ ನೆರವಾಗುತ್ತಿರುವುದು ಅವರ ತಾಯಿ ಮಹೇಶ್ವರಿ (ಮ್ಯಾಶ್). ಜಾಗತಿಕ ಕ್ರೀಡೆಯಲ್ಲಿ ಇಂಥ ಸಂದರ್ಭವೊಂದು ಕಾಣಸಿಗುವುದು ಅತ್ಯಂತ ವಿರಳ.
ಭಾರತದ ಯುವ ಗಾಲ್ಫರ್ ಬೆಂಗಳೂರಿನ ಅದಿತಿ ಅಶೋಕ್ ಈಗ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಎರಡನೇ ಒಲಿಂಪಿಕ್ಸ್. ಈ ಹಿಂದೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಅದಿತಿ ಪಾತ್ರರಾಗಿದ್ದರು.

ರಿಯೋದಲ್ಲಿ ಸ್ಪರ್ಧಿಸಿದಾಗ ಅವರಿಗೆ 18 ವರ್ಷ 4 ತಿಂಗಳು, ಆ ಒಲಿಂಪಿಕ್ಸ್ ನಲ್ಲಿ ಗಾಲ್ಫ್ ನಲ್ಲಿ ಸ್ಪರ್ಧಿಸಿದ್ದ ಅತ್ಯಂತ ಕಿರಿಯ ಆಟಗಾರ್ತಿಯೂ ಕೂಡ. ರಿಯೋದಲ್ಲಿ ಅದಿತಿಯ ಸ್ಪರ್ಧೆಯಿಂದಾಗಿ ಗಾಲ್ಫ್ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಾಖಲೆ ನಿರ್ಮಾಣವಾಗಿತ್ತು. ಕ್ರೀಡಾ ಜಗತ್ತು ಆ ಕ್ಷಣವನ್ನು ಎಂದೂ ಮರೆಯದು. ಅದಿತಿ ಅವರ ತಂದೆ ಅಶೋಕ್ ಅವರು ಕ್ಯಾಡಿಯಾಗಿ ಅಂದು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ನೆರವಾಗುವವರನ್ನು ಗಾಲ್ಫ್ ನಲ್ಲಿ ಕ್ಯಾಡಿಗಳು ಎಂದು ಕರೆಯುತ್ತಾರೆ. ಮಗಳಿಗೆ ತಂದೆಯೇ ಕ್ಯಾಡಿಯಾಗಿ ನೆರವಾಗಿರುವುದು ಗಾಲ್ಫ್ ಇತಿಹಾದಲ್ಲೇ ವಿರಳ. ಬೇರೆ ಟೂರ್ನಿಗಳಲ್ಲಿ ಇದ್ದಿರಬಹುದೇನೊ, ಆದರೆ ಒಲಿಂಪಿಕ್ಸ್ ನಲ್ಲಿ ಮಾತ್ರ ಅಪೂರ್ವ.
ಸದ್ಯ ವಿಶ್ವದಲ್ಲಿ 178ನೇ ರಾಂಕ್ ಹೊಂದಿರುವ ಅದಿತಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮತ್ತೆ ಕ್ರೀಡಾ ಜಗತ್ತಿನ ಗಮನ ಸೆಳೆದಿದ್ದಾರೆ. ಏಕೆಂದರೆ ಅವರಿಗೆ ಈ ಬಾರಿ ಕ್ಯಾಡಿಯಾಗಿ ನೆರವಾಗುತ್ತಿರುವುದು ಅವರ ತಾಯಿ ಮಹೇಶ್ವರಿ.
ಅದಿತಿ ಅವರ ಕೆಲವು ಪ್ರಮುಖ ಸಾಧನೆಗಳು:
ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡ ಅತ್ಯಂತ ಕಿರಿಯ ಗಾಲ್ಫರ್ (18 ವರ್ಷ 4 ತಿಂಗಳು, 2016).
ಏಷ್ಯನ್ ಯೂಥ್ ಗೇಮ್ಸ್, ಯೂಥ್ ಒಲಿಂಪಿಕ್ಸ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಗೇಮ್ಸ್ ಆಡಿರುವ ಏಕೈಕ ಗಾಲ್ಫರ್.
17ನೇ ವಯಸ್ಸಿನಲ್ಲೇ ಎಲ್ಇಟಿ ಕ್ಯೂ –ಸ್ಕೂಲ್ ಜಯ ಗಳಿಸಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಗಾಲ್ಫರ್.
ಮೂರು ಬಾರಿ ಎಲ್ಇಟಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ.
ಎಲ್ಇಟಿ 2016 ಆರ್ಡರ್ ಆಫ್ ಮೆರಿಟ್ ನಲ್ಲಿ 2ನೇ ಸ್ಥಾನ, ಈ ಸಾಧನೆ ಮಾಡಿದ ಭಾರತದ ಮೊದಲ ಗಾಲ್ಫರ್.
ಎಲ್ಇಟಿಯಲ್ಲಿ ಭಾರತದ ಮೊದಲ ರೂಕಿ (ಯುವ ಆಟಗಾರ್ತಿ)
ಒಂದೇ ಋತುವಿನಲ್ಲಿ ಎಲ್ಲ ಪ್ರಧಾನ ಟೂರ್ನಿ ಆಡಿದ ಭಾರತದ ಮೊದಲ ಕಿರಿಯ ಆಟಗಾರ್ತಿ.
ಎಲ್ಪಜಿಎ ಮತ್ತು ಎಲ್ಇಟಿ ಟೂರ್ ಗೆ ಆಯ್ಕೆಯಾದ ಭಾರತದ ಮೊದಲ ಕಿರಿಯ ಆಟಗಾರ್ತಿ.



