ಅಂಕಣಗಳುಇತರ ಕ್ರೀಡೆಕ್ರೀಡೆ

ಕರ್ನಾಟಕದಲ್ಲೊಂದು ಕ್ರೀಡಾ ವಿವಿ ಸ್ಥಾಪಿಸಬಾರದೇಕೆ?

ಸೋಮಶೇಖರ್ ಪಡುಕರೆ

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ ಅವರು ಆಂಧ್ರಪ್ರದೇಶದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಅಲ್ಲಿಯ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಭಾರತದ ಕ್ರೀಡಾ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಕಾರ್ಯ. ದಿಲ್ಲಿಯ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕರ್ಣಂ ಮಲ್ಲೇಶ್ವರಿ ಉಪಕುಲಪತಿಯಾಗಿದ್ದಾರೆ. ಇದೆಲ್ಲ ಖುಷಿ ಕೊಡುವ ಸಂಗತಿ.

ಹಾಗೆ ನೋಡಿದರೆ ಎಲ್ಲ ಕ್ರೀಡಾಪಟುಗಳಿಗೆ ತರಬೇತಿಯ ಕೇಂದ್ರ ಎನಿಸಿರುವುದು ಬೆಂಗಳೂರು. ಆದ್ದರಿಂದ ಕರ್ನಾಟಕದಲ್ಲಿ ಯಾಕೆ ಕ್ರೀಡಾ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಬಾರದು ? ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳಲ್ಲಿ ಹುಟ್ಟುವುದು ಸಹಜ.

ಹಾಕಿ, ಅಥ್ಲೆಟಿಕ್ಸ್, ಕಬಡ್ಡಿ, ಕ್ರಿಕೆಟ್, ಈಜಿ, ಬ್ಯಾಡ್ಮಿಂಟನ್, ಬಾಕ್ಸಿಂಗ್, ಸೈಕ್ಲಿಂಗ್, ಕುಸ್ತಿ, ಮೋಟಾರ್ ರೇಸ್, ವೇಟ್ ಲಿಫ್ಟಿಂಗ್, ಸ್ನೂಕರ್, ಬಿಲಿಯರ್ಡ್ಸ್, ಪರ್ವತಾರೋಹಣ, ಸ್ಪೂರ್ಟ್ ಕ್ಲೈಂಬಿಂಗ್, ಬಾಸ್ಕೆಟ್ ಬಾಲ್, ಸ್ಕ್ವ್ಯಾಷ್, ಟೆನಿಸ್, ಗಾಲ್ಫ್, ಪ್ಯಾರಾಲಿಂಪಿಕ್ ಸ್ಪೋರ್ಟ್ಸ್, ಚೆಸ್, ಇಕ್ವೆಸ್ಟ್ರಿಯನ್, ಸೈಕ್ಲಿಂಗ್ ಹೀಗೆ ಯಾವುದೇ ಕ್ರೀಡೆಯನ್ನು ಆಯ್ಕೆ ಮಾಡಿ ಇಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ದೇಶದ ಯಾವುದೇ ರಾಜ್ಯವನ್ನು ಆಯ್ಕೆ ಮಾಡಿದರೂ ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕರ್ನಾಟಕದಲ್ಲೇ ಯಾಕೆ?

ಬೇರೆ ರಾಜ್ಯದವರು ಕ್ರೀಡಾ ವಿಶ್ವವಿದ್ಯಾಲಯ ಕಟ್ಟಿದ ಕಾರಣಕ್ಕೆ ನಾವು ಕಟ್ಟಬೇಕೆಂದಲ್ಲ. ಆದರೆ ಇಲ್ಲಿಯ ಕ್ರೀಡಾ ಚಟುವಟಿಕೆಗಳನ್ನು ಗಮನಿಸಿದರೆ ಯಾಕೆ ಬೇಕೆಂಬುದು ಸ್ಪಷ್ಟವಾಗುತ್ತದೆ. ಹಾಕಿ ಕ್ರೀಡೆಯನ್ನೇ ತೆಗೆದುಕೊಳ್ಳಿ ನೂರಕ್ಕೂ ಹೆಚ್ಚು ಒಲಿಂಪಿಯನ್ನರನ್ನು ಕೊಟ್ಟ ನಾಡು ಕರ್ನಾಟಕ. ಟೊಕಿಯೋ ಒಲಿಂಪಿಕ್ಸ್ ಹೊರತುಪಡಿದರೆ ಭಾರತ ಯಾವೆಲ್ಲ ಒಲಿಂಪಿಕ್ಸ್ ಗಳಲ್ಲಿ ಸ್ಪರ್ಧಿಸಿದೆಯೋ ಅಲ್ಲಿ ಕನ್ನಡಿಗರಿದ್ದಾರೆ, ವಿಶೇಷವಾಗಿ ಕೊಡಗಿನ ಆಟಗಾರರಿದ್ದಾರೆ. ಕ್ರಿಕೆಟ್ ನಲ್ಲಿ ಕನ್ನಡಿಗರು ಛಾಪು ಮೂಡಿಸಿದ್ದಷ್ಟು ಬೇರೆ ರಾಜ್ಯಗಳ ಆಟಗಾರರು ಮೂಡಿಸಿರಲಿಲ್ಲ.

ಐಪಿಎಲ್ ನಲ್ಲಿ ಹೆಚ್ಚಿನ ತಂಡಗಳಲ್ಲಿ ಕನ್ನಡಿಗರು ಆಡುತ್ತಿರುವುದು ವಿಶೇಷ. ರಣಜಿಯಲ್ಲಿ ನಮ್ಮ ತಂಡ ನಿರಂತರವಾಗಿ ಉತ್ತಮ ಪ್ರದರ್ಶನ ತೋರುತ್ತಿದೆ. ಬ್ಯಾಡ್ಮಿಂಟನ್ ನಲ್ಲಿ ಪ್ರಕಾಶ್ ಪಡುಕೋಣೆ, ವಿಮಲ್ ಕುಮಾರ್, ಅಶ್ವಿನಿ ಪೊನ್ನಪ್ಪ ಆಟಗಾರರನ್ನು ನೀಡಿದ ನೆಲ. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರರು ಬೆಂಗಳೂರಿನಲ್ಲಿ ತರಬೇತಿ ಪಡೆಯದೆ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡ ದಿನಗಳು ವಿರಳ. ಇದಕ್ಕೆ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧೂ ಉತ್ತಮ ನಿದರ್ಶನ.

ಯಾವುದೇ ಲೀಗ್ ಗಳನ್ನು ಗಮನಿಸಿದರೂ ಅದು ಹುಟ್ಟಿಕೊಂಡಿದ್ದೇ ಬೆಂಗಳೂರಿನಲ್ಲಿ. ಚರ್ಚೆ ಎಲ್ಲೇ ನಡೆಯಲಿ ಆದರೆ ಲೀಗ್ ಯಶಸ್ಸು ಕಾಣಬೇಕಾದರೆ ಅದು ಬೆಂಗಳೂರಿನಲ್ಲಿ ನಡೆಯಬೇಕು. ಈ ಬಾರಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆಯ್ಕೆ ಪ್ರಕ್ರಿಯೆಗಳು ಎಲ್ಲಿಯೇ ನಡೆಯಲಿ ಆದರೆ ತರಬೇತಿಗೆ ಮಾತ್ರ ಬೆಂಗಳೂರಿಗೆ ಬರಬೇಕು. ಬೆಂಗಳೂರಿನ ಬಸವನಗುಡಿ ಅಕ್ವೆಟಿಕ್ ಸೆಂಟರ್ ಮತ್ತು ಡಾಲ್ಫಿನ್ ಅಕ್ವೆಟಿಕ್ ಸೆಂಟರ್ ಗಳು ಹಲವಾರು ಒಲಿಂಪಿಕ್ ಈಜುಪಟುಗಳನ್ನು ಹುಟ್ಟುಹಾಕಿದೆ. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಶ್ರೀಹರಿ ನಟರಾಜ್ ಮತ್ತು ಸಜ್ಜನ್ ಪ್ರಕಾಶ್ ತರಬೇತಿ ಪಡೆದಿರುವುದು ಬೆಂಗಳೂರಿನಲ್ಲಿ. ಗ್ರ್ಯಾನ್ ಸ್ಲಾಮ್ ಆಡಿದ ಟೆನಿಸ್ ಆಟಗಾರರಿದ್ದಾರೆ. ರಾಜ್ಯದಲ್ಲಿರುವ ಕ್ರೀಡಾ ಹಾಸ್ಟೆಲ್ ಗಳಲ್ಲಿ ಪಳಗಿದ ಕ್ರೀಡಾಪಟುಗಳಿಗೆ ಮುಂದೇನು ಎಂಬ ಪ್ರಶ್ನೆಗೆ ಕ್ರೀಡಾ ವಿಶ್ವವಿದ್ಯಾನಿಲಯಗಳು ಉತ್ತರ ನೀಡಬಹುದು.

ಪ್ರತಿ ಬಾರಿಯೂ ರಾಷ್ಟ್ರೀಯ ಸೈಕ್ಲಿಂಗ್ ನಲ್ಲಿ ಬಿಜಾಪುರದ ಸೈಕ್ಲಿಸ್ಟ್ ಗಳು ಚಾಂಪಿಯನ್ ಪಟ್ಟ ಗೆಲ್ಲುತ್ತಾರೆ. ಜಗತ್ತಿನ ಅತ್ಯಂತ ಅಪಾಯಕಾರಿ ಬೈಕ್ ರಾಲಿಯಲ್ಲಿ ಕನ್ನಡಿಗರು ದೇಶವನ್ನು ಪ್ರತಿನಿಧಿಸಿದ ಮೊದಲಿಗರೆನಿಸದ್ದಾರೆ. ಮೋಟಾರ್ ಸ್ಪೋರ್ಟ್ಸ್ ಚಾಂಪಿಯನ್ಷಿಪ್ ದೇಶದ ಯಾವುದೇ ಭಾಗದಲ್ಲೇ ನಡೆಯಲಿ ಅಲ್ಲಿ ಕನ್ನಡಿಗರ ಛಾಪು ಇದ್ದೇ ಇರತ್ತದೆ. ಕ್ರೀಡಾ ಮನಃಶಾಸ್ತ್ರದಲ್ಲೂ ಕನ್ನಡಿಗರು ಮುಂಚೂಣಿಯಲ್ಲಿದ್ದಾರೆ. ಭಾರತ ಹಾಕಿ ತಂಡ, ಕ್ರಿಕೆಟ್, ಐಪಿಎಲ್ ಸೇರಿದಂತೆ ಪ್ರಮುಖ ಲೀಗ್ ಗಳಲ್ಲಿ ಕನ್ನಡಿಗರು ಕಾರ್ಯವೆಸಗಿದ್ದಾರೆ. ಪ್ರೋ ಕಬಡ್ಡಿ ಲೀಗ್ ನಲ್ಲಿ ಹಲವಾರು ಆಟಗಾರರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಅನುಭವಿ ತರಬೇತದಾರರಿದ್ದಾರೆ, ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಕ್ರೀಡಾಪಟುಗಳಿದ್ದಾರೆ, ಕ್ರೀಡಾಪಟುಗಳಿಗೆ ನೆರವಾಗುವ ಫಿಸಿಯೋಥೆರಪಿಸ್ಟ್ ಇದ್ದಾರೆ, ಸ್ಪೋರ್ಟ್ಸ್ ಮೆಡಿಸಿನ್ ಆಸ್ಪತ್ರೆ ಇದೆ, ಅಂತಾರಾಷ್ಟ್ರೀಯ ಗುಣಮಟ್ಟದ ಅಕಾಡೆಮಿಗಳಿವೆ…..ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಬಗ್ಗೆ ಶಿಕ್ಷಣ ನೀಡುವ ಕಾಲೇಜುಗಳಿವೆ….ಕ್ರೀಡಾ ಆಡಳಿತಗಾರರಿದ್ದಾರೆ… ಹೀಗೆ ಒಲಿಂಪಿಕ್ಸ್ ಕ್ರೀಡೆಗಳು ಮತ್ತು ಗ್ರಾಮೀಣ ಕ್ರೀಡೆಗಳಿಗೆ ನಮ್ಮ ರಾಜ್ಯ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮುಂಚೂಣಿಯಲ್ಲಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಆಭಿನವ್ ಬಿಂದ್ರಾ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬೆಂಗಳೂರು ಕ್ರೀಡಾ ತರಬೇತಿಗೆ, ಕ್ರೀಡಾಪಟುಗಳಿಗೆ ಯೋಗ್ಯವಾದ ಸ್ಥಳ ಎಂದು ಹಿಂದೆಯೇ ಹೇಳಿದ್ದರು.

ಒಂದು ಕ್ರೀಡಾ ವಿಶ್ವಾವಿದ್ಯಾಲಯ ಮಾಡಲು ಇನ್ನೇನು ಬೇಕು?…..ಏನೂ ಬೇಡ…ಕ್ರೀಡೆಯ ಬಗ್ಗೆ ಪ್ರೀತಿ… ಆರಂಭಿಸುವ ಮನಸ್ಸು ಅಷ್ಟೇ ಸಾಕು…

Spread the love

Related Articles

Leave a Reply

Your email address will not be published. Required fields are marked *

Back to top button