ಒಲಿಂಪಿಕ್ಸ್: ಸೋತರೂ ಲವ್ಲಿನಾಗೆ ಕಂಚಿನ ಮಿಂಚು

ಟೋಕಿಯೋ: ವಿಶ್ವ ಚಾಂಪಿಯನ್ ಟರ್ಕಿಯ ಬುಸೆನಾಸ್ ಸುರ್ಮೆನ್ಲಿ ವಿರುದ್ಧ 5-0 ಅಂತರದಲ್ಲಿ ಸೋಲನುಭವಿಸಿದರೂ ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೆನ್ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
69 ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಸೋಲನುಭವಿಸಿದರೂ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ದೇಶದ ಮೂರನೇ ಬಾಕ್ಸರ್ ಎನಿಸಿದರು. ಮೇರಿ ಕೊಮ್ ಮತ್ತು ವಿಜೇಂದರ್ ಸಿಂಗ್ ಇದುವರೆಗೂ ಪದಕ ಗೆದ್ದ ಸಾಧಕರು. ವಿಶ್ವಕಪ್ ನಲ್ಲಿ ಪದಕ ಗೆದ್ದಿರುವ ಚೈನೀಸ್ ತೈಪೆಯ ಚೆನ್ ನೈನ್ –ಚಿನ್ ವಿರುದ್ಧ ಕ್ವಾರ್ಟ್ ಫೈನಲ್ ನಲ್ಲಿ 4-1 ಅಂತರದಲ್ಲಿ ಜಯ ಗಳಿಸುವ ಮೂಲಕ ಲವ್ಲಿನಾ ಅಚ್ಚರಿ ಮೂಡಿಸಿ ಪದಕವನ್ನು ಖಚಿತಪಡಿಸಿದ್ದರು.
ಸುರ್ಮೆನ್ಲಿ ವಿರುದ್ಧ ಇದುವರೆಗೂ ಸ್ಪರ್ಧಿಸದಿರುವ ಲವ್ಲಿವಾ ಅವರ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತ ಇದುವರೆಗೂ ಮೂರು ಪದಕಗಳನ್ನು ಗೆದ್ದಂತಾಗಿದೆ. ವಿಶೇಷವೆಂದರೆ ಈ ಬಾರಿ ಎಲ್ಲ ಪದಕಗಳನ್ನು ಗೆದ್ದಿರುವುದು ಮಹಿಳಾ ಸ್ಪರ್ಧಿಸಿಗಳೇ. 23 ವರ್ಷದ ಲವ್ಲಿನಾ ಮುಂದಿನ ದಿನಗಳಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ.
