ತಾಯಿ ಮದನಘಟ್ಟದ ಮಾರಮ್ಮ ದೇವಿ ಸುಕ್ಷೇತ್ರ: ಸರ್ವ ಸಂಕಷ್ಟ ನಿವಾರಣೆಯ ಪುಣ್ಯಕ್ಷೇತ್ರ

ಶಕ್ತಿ ಸ್ವರೂಪಿಣಿ ತಾಯಿ ಪಾರ್ವತಿ ದೇವಿಯೂ ಅನೇಕ ಅವತಾರಗಳಲ್ಲಿ ಜನ್ಮ ತಾಳಿ ಭೂಲೋಕದಲ್ಲಿ ಇಷ್ಟದೇವತೆಯಾಗಿ ಶಕ್ತಿ ದೇವತೆಯಾಗಿ ಭಕ್ತರ ಇಷ್ಟಾರ್ಥಗಳನ್ನ ನೆರವೇರಿಸುತ್ತಿದ್ದಾಳೆ. ಇಂತಹ ದೇವಿ ಸುಕ್ಷೇತ್ರ ಮದನಘಟ್ಟದಲ್ಲಿ ನೆಲೆ ನಿಂತದ್ದು ಕೂಡ ಒಂದು ರೋಚಕವೇ.
ಇಷ್ಟಕ್ಕು ಈಕೆಯ ಹುಟ್ಟು ಹೇಗಾಯ್ತು, ದೇವಿ ಮದನಘಟಕ್ಕೆ ಬಂದು ನೆಲೆಸಿದ್ದು ಹೇಗೆ ಎಂಬುದಕ್ಕೆ ಪುರಾಣದ ಐತಿಹ್ಯವಿದೆ. ಸುಮಾರು ಐದು ತಲೆ ಮಾರುಗಳಿಂದಲೂ ಪೂಜಿಸಿಕೊಂಡು ಬರುತ್ತಿರುವ ಈ ಶಕ್ತಿ ಸ್ವರೂಪಿಣಿಯ ಕೃಪೆಗೆ ಇದುವರೆಗೂ ಲೆಕ್ಕವಿಲ್ಲದಷ್ಟು ಭಕ್ತರು ಭಾಗಿಯಾಗಿದ್ದಾರೆ. ಇಂತಹ ದೇವಿಯ ಇತಿಹಾಸವಾದ್ರೂ ಏನು ಅಂತ ನೋಡುದ್ರೆ, ಸಾಕಷ್ಟು ಮಂದಿಗೆ ತಿಳಿಯದ ಒಂದು ಕೂತುಹಲಕಾರಿ ಕಥೆ ತೆರೆದುಕೊಳ್ಳುತ್ತದೆ.
ಒಮ್ಮೆ ಪರಶಿವ ತನ್ನ ಸತಿ ಪಾರ್ವತಿ ಹಾಗೂ ನಾರದಮುನಿಗಳೊಡನೆ ತ್ರಿಲೋಕ ಸಂಚಾರದಲ್ಲಿದ್ದಾಗ ಪರಮಾತ್ಮನಿಗೆ ಆಯಾಸವಾಗಿ ಎಲ್ಲರೂ ಸುರು ಹೊನ್ನೆ ವನದಲ್ಲಿ ವಿಶ್ರಾಂತಿಯನ್ನ ಪಡೆಯುತ್ತಿರುತ್ತಾರೆ. ಈ ವೇಳೆ ಪರಮಾತ್ಮನಿಗೆ ತಲೆ ತುರಿಕೆ ಆರಂಭವಾಗುತ್ತದೆ. ಆಗ ಪರಶಿವನು, ಪಕ್ಕದಲ್ಲೆ ಕುಳಿತಿದ್ದ ಸತಿ ಪಾರ್ವತಿಗೆ ತಲೆ ಕಡಿಯುತ್ತಿದೆ ಸ್ವಲ್ಪ ನೋಡು ಅನ್ನುತ್ತಾರೆ. ಅದ್ರಂತೆ ಪಾರ್ವತಿ, ಚಿನ್ನದ ಬಾಚಣಿಗೆ ಬೆಳ್ಳಿಯ ಸೀರಣಿಗೆಯಿಂದ ಸುಮಾರು 20 ಸುತ್ತು ಬಗೆದು ನೋಡುತ್ತಾರೆ. ಆದ್ರೆ, ಪರಶಿವನ ತಲೆಯ ಕಡಿತಕ್ಕೆ ಕಾರಣ ಗೊತ್ತಾಗೋದಿಲ್ಲ. ಇತ್ತ ಪರಶಿವನಿಗೆ ತಲೆಯ ಕಡಿತ ನಿಲ್ಲುವುದಿಲ್ಲ. ಆಗ ಕೋಪಗೊಂಡ ಪರಶಿವ, ಪರಮೇಶ್ವರಿಗೆ, ನೀನು ಸರಿಯಾಗಿ ತಲೆ ನೋಡುತ್ತಿಲ್ಲ, ನಿನ್ನ ಜ್ಞಾನ ಇಲ್ಲಿಲ್ಲ ಎಂದು ರೇಗುತ್ತಾರೆ. ಪರಶಿವನ ಕೋಪ ಕಂಡ ಸತಿಯ ಕಣ್ಣಂಚಲ್ಲಿ ನೀರು ಜಿನುಗುತ್ತವೆ.

ಆ ಕಣ್ಣೀರು ಪರಶಿವನ ತೊಡೆಯ ಮೇಲೆ ಬೀಳುತ್ತದೆ. ಪಾರ್ವತಿಯ ಕಣ್ಣೀರು ಶಿವನ ತೊಡೆಯ ಮೇಲೆ ಬೀಳುವುದಕ್ಕು ತಲೆಯ ಕಡಿತ ನಿಲ್ಲುವುದಕ್ಕೂ ಒಂದೇ ಆಗುತ್ತದೆ. ಅರೇ ಇದೇನಾಶ್ಚರ್ಯ ಪಾರ್ವತಿ, ನಿನ್ನ ಕಣ್ಣೀರು ತೊಡೆಯ ಮೇಲೆ ಬೀಳುತ್ತಲೇ ಕಡಿತ ಮಾಯವಾಯಿತಲ್ಲ, ಏನಿರಬಹುದು ಎಂದು ಉಗುರು ಕಣ್ಣಿನಲ್ಲಿ ಆ ಕಣ್ಣೀರನ್ನ ಅಂಗೈ ಮೇಲೆ ಹಾಕಿಕೊಂಡು ಹೊಸಗಿ ನೋಡುತ್ತಾರೆ. ಆಗಲೇ ಅಲ್ಲೊಂದು ವಿಚಿತ್ರವಾದ ಹುಳು ಉದ್ಭವಿಸುತ್ತದೆ. ಸುಮಾರು 16 ಕೈಗಳು, ಎರಡು ತಲೆಯ ಹುಳುವದು. ಇದೇನು ವಿಚಿತ್ರ, ಎಂದು ಆ ಹುಳುವನ್ನ ಎತ್ತಿಕೊಂಡು ನೆಲದ ಮೇಲೆ ಬಿಡುತ್ತಲೇ 12 ವರ್ಷದ ಬಾಲೆಯೊಬ್ಬಳ ಅವತಾರವಾಗುತ್ತದೆ. ಈ ರೀತಿ ಮದನಘಟ್ಟಮ್ಮ ದೇವಿ ಜನಿಸುತ್ತಾಳೆ.
ಜನನವೇನೋ ಆಯ್ತು. ಆಕೆ ಭೂಲೋಕಕ್ಕೆ ಬಂದಿದ್ದು ಹೇಗೆ ಅನ್ನುವ ಕಥೆಯೂ ರೋಚಕವಾಗಿದೆ. ಭಕ್ತರೇ, ಎಲ್ಲಾ ದೇವತೆಗಳಿಗೂ ಕೂಡ, ಭಕ್ತರ ಇಷ್ಟಾರ್ಥ ನೆರೆವೇರಿಸುವುದು ಮೊದಲ ಕಾಯಕ. ಅದೇ ರೀತಿ, ಈ ದೇವಿಯೂ ಕೂಡ, ನಾನು ದೇವಲೋಕದಲ್ಲಿ ಇರೋದಿಲ್ಲ, ನರಲೋಕದ ಉದ್ದಾರಕ್ಕಾಗಿ ನನ್ನನ್ನು ಕಳಿಸಿಕೊಡಿ ಎಂದು ಮನವಿ ಮಾಡುತ್ತಾಳೆ. ಅದ್ರಂತೆ ಶಿವ ಪಾರ್ವತಿಯರು, ಆಕೆಯನ್ನ ಆಶಿರ್ವಧಿಸಿ ನಿನಗೆ ಇಷ್ಟ ಬಂದ ಕಡೆ ನೆಲೆಸು ಎಂದು ಕಳಿಸುತ್ತಾರೆ. ಕೇವಲ ದೇವಿಯಾಗಿ ಶಕ್ತಿ ಹೀನಳಾಗಿ ಹೋಗುವುದಕ್ಕಿಂತ, ರೋಗ ರುಜಿನಗಳ ಭಾದೆಯನ್ನೂ, ಕೋಪತಾಪಗಳನ್ನ ತಡೆಯುವ ಶಕ್ತಿಯನ್ನು, ನಿಗ್ರಹಿಸುವ ಶಕ್ತಿ ಕೊಟ್ಟರೆ ನಾನು ಹೋಗುತ್ತೇನೆ ಎನ್ನುತ್ತಾಳೆ. ಅದ್ರಂತೆ ಪಾರ್ವತಿ ಮತ್ತು ಪರಶಿವ ಶಕ್ತಿಯನ್ನ ಧಾರೆ ಎರೆದು ಕಳಿಸಿಕೊಡ್ತಾರೆ.
ಸ್ವರ್ಗದಿಂದ ಹೊರಟ 12ರ ಹರೆಯದ ಮಾತೆ ಬಂದಿದ್ದು ಚಿತ್ರದುರ್ಗ ಜಿಲ್ಲೆ ಎರಬಳ್ಳಿ ಎಂಬ ಸ್ಥಳಕ್ಕೆ. ಅಲ್ಲಿ ನೋಡಿದ್ರೆ, ಸುತ್ತಲೂ ನಿರ್ಜನ ಪ್ರದೇಶ..ಎತ್ತ ನೋಡಿದರೂ ಬಟಾ ಬಯಲು. ಊರು ಮಾತ್ರ ಕಾಣುತ್ತಿತ್ತು. ಆದ್ರೆ ಜನರ ಸುಳಿವಿಲ್ಲ.. ಇದೇ ರೀತಿಯಲ್ಲಿ ನೋಡುತ್ತಿರುವಾಗಲೇ ರಸ್ತೆಯಲ್ಲಿ ಶೆಟ್ಟರೊಬ್ಬರು ಎತ್ತಿನ ಮೇಲೆ ವಜ್ರ ವೈಡೂರ್ಯಗಳ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು.

ಈ ರೀತಿ ಬರುವಾಗ ಎತ್ತಿನ ಮೇಲೆ ಏರಿದ್ದ ಒಂದು ಭಾಗ ತೂಕ ಹೆಚ್ಚಾಗಿ ವಾಲ ತೊಡಗಿತ್ತು. ಇತ್ತ ಶೆಟ್ಟರನ್ನ ಕಂಡ ದೇವಿ, ತಕ್ಷಣ ಕಲ್ಲೊಂದರಲ್ಲಿ ಸೇರಿಕೊಂಡಳು. ಆ ಗುಂಡು ಕಲ್ಲನ್ನ ಕಂಡ ಶೆಟ್ಟರು, ತೂಕ ಕಡಿಮೆ ಇದ್ದ ಕಡೆಗೆ ಎತ್ತಿ ಆ ಕಲ್ಲನ್ನ ಹಾಕಿದ್ರು. ಎತ್ತಿನ ಮೇಲಿದ್ದ ಭಾರ ಸಮನಾಯ್ತು. ಈ ರೀತಿ ಧರೆಗೆ ಬಂದು ಶೆಟ್ಟರ ಮನೆ ಸೇರಿದ ದೇವಿ ಮುಂದೆ ಅಮೃತ್ ಕಾವಲ್ ಅಂದ್ರೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮದನಘಟ್ಟ ಗ್ರಾಮದಲ್ಲಿ ವಾಸವಿದ್ದ ಹಿಂದಿನ ಐದನೇ ತಲೆ ಮಾರಿನ ಭಕ್ತರು ಎರಬಳ್ಳಿಗೆ ಹೋಗಿ ಬರುತ್ತಿದ್ದರು.
ಸರ್ಕಾರಿ ದನಗಳನ್ನ ಕಾಯುತ್ತಿದ್ದ ಇವರಿಗೆ ಬಂಢಾರದ ವಿಭಜನೆ ವೇಳೆ, ಆ ಕಲ್ಲು ಕೂಡ ಬಂತು. ಅಲ್ಲಿಂದಾಚೆಗೆ ಊರಲ್ಲಿ ಮಳೆ ಬೆಳೆ ದವಸ ಧಾನ್ಯಗಳು ಹೇರಳವಾದವು. ಈ ಕಲ್ಲಿನಲ್ಲಿ ದೈವಿ ಶಕ್ತಿ ಇದೆ ಅನ್ನೋದು ಹಿರಿಯರಿಗೆ ಗೊತ್ತಾಯ್ತು. ಅದನ್ನ ಗುಡಿಸಲಿನಲ್ಲಿ ಇಟ್ಟು ಪೂಜೆ ಮಾಡಲಾರಂಭಿಸಿದರು. ಅದೊಮ್ಮೆ ಪೂಜೆಗೆಂದು ಹಾಲು ಕರೆದು ಕಾಯಿಸಲು ಇಟ್ಟಾಗ, ಹಾಲು ಉಕ್ಕಿ ನೆಲಕ್ಕೆ ಸುರಿಯಿತು. ಮರುದಿನವೇ ಆ ಸ್ಥಳದಲ್ಲಿ ಒಂದೂವರೆ ಅಡಿ ಎತ್ತರ ಹುತ್ತ ಬೆಳೆದಿತ್ತು. ಆಶ್ಚರ್ಯಗೊಂಡ ಹಿರಿಯರು, ದೇವಿಯನ್ನ ನಂಬಿದ್ರು, ಆಕೆಯ ಇಚ್ಚೆಯಂತೆ ಉದ್ಭವವಾದ ಹುತ್ತಕ್ಕೆ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಇಂದಿಗೂ ಅವತ್ತು ಪ್ರಾರಂಭವಾದ ಪೂಜಾ ಕೈಂಕರ್ಯ ನಿಂತಿಲ್ಲ. ಪ್ರತಿ ವರ್ಷ ಯುಗಾದಿಯ ಮರುದಿನದ ಲೆಕ್ಕಕ್ಕೆ 21ನೇ ದಿನ ದೇವಿ ಜಾತ್ರ ಮಹೋತ್ಸವ ನೆರವೇರುತ್ತದೆ. ಸಾವಿರಾರು ಭಕ್ತರು ಬಂದು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಇನ್ನು ಉದ್ಭವ ಮೂತಿಯನ್ನ ಹೊರ ತರುವುದಿಲ್ಲ. ಮೆರವಣಿಗೆ ದೇವರನ್ನ ಹಿಂದಿನ ಕಾಲದಲ್ಲಿ ಉಪವಾಸವಿದ್ದು, ಆಚಾರರು ಮಾಡಿಕೊಟ್ಟಿರುವಂತದ್ದು, ಜನರ ಕಷ್ಟ ಕಾರ್ಪಣ್ಯ ತೊಳೆಯಲು ದೇವಿಗೆ ಭೂತಪ್ಪ, ಪಾದಪ್ಪ, ದಾಳಿಯಮ್ಮ, ಸೋಮ ದೇವರುಗಳು ಜೊತೆಯಾಗಿವೆ. ನೆಲೆಯಮ್ಮನಿಗೆ ಸಿಹಿ ಮಾಡಿದ್ರೆ, ಭೂತಪ್ಪಗಳಿಗೆ ಖಾರದ ಅಡುಗೆ ನೈವೇದ್ಯ ಮಾಡಲಾಗುತ್ತದೆ. ಭಕ್ತರು ಹರಕೆ ಹೊತ್ತು, ಒಂದು ಮಳ ಹೂ ತಂದು ಪೂಜೆ ಮಾಡುಸ್ತೀನಿ ತಾಯಿ ಅಂದರೂ ಸಾಕು, ಅವರ ಇಷ್ಟಾರ್ಥವನ್ನ ನೆರೆವೇರಿಸೋ ದೇವಿಗೆ ನಮ್ಮ ನಿಮ್ಮೆಲ್ಲರ ಉಧೋ ಉಧೋ..ತಿಳಿದಿರುವಷ್ಟು ಮಾಹಿತಿ ನೀಡಿದ್ದೇವೆ. ತಪ್ಪಿದ್ದರೆ ದೇವಿ ಕ್ಷಮಿಸುತ್ತಾಳೆ ಎಂಬ ನಂಬಿಕೆಯಿಂದ ಈ ಕಥೆಯನ್ನ ತಿಳಿಸಿದ್ದೇವೆ. ತಾಯಿ ಮದನಘಟಮ್ಮ ಎಲ್ಲರಿಗೂ ಒಳಿತನ್ನ ಮಾಡಲಿ.
-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24×7 ಲೈವ್ ಕನ್ನಡ



