ಆಫ್ರಿಕಾದಲ್ಲೂ ಕೆಜಿಎಫ್ 2 ಹವಾ: ರಾಕಿ ಭಾಯ್ ಡೈಲಾಗ್ ಹೊಡೆದ ಕಿಲಿ ಪೌಲ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈಗಾಗ್ಲೆ ವಿಶ್ವದಾದ್ಯಂತ ತೆರೆಗೆ ಬಂದಿರೋ ಕೆಜಿಎಫ್ ಚಾಪ್ಟರ್ 2 ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸದ್ಯ ರಾಕಿಭಾಯ್ ಹವಾ ಆಫ್ರಿಕಾಗೂ ತಲುಪಿದ್ದು ಯಶ್ ಡೈಲಾಗ್ ಗೆ ಅಲ್ಲಿನ ಮಂದಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿರೋ ಆಫ್ರಿಕಾದ ಕಿಲಿ ಪೌಲ್ ಬಗ್ಗೆ ನಿಮಗೆ ಗೊತ್ತೆ ಇರುತ್ತೆ. ಈಗಾಗ್ಲೆ ಸಾಕಷ್ಟು ಹಾಡುಗಳನ್ನ ಲಿಪ್ ಸಿಂಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯಿಂದಲೂ ಶಹಭಾಷ್ ಅನಿಸಿಕೊಂಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಸಖತ್ ಆಕ್ಟಿವ್ ಆಗಿರುವ ಕಿಲಿ ಪೌಲ್ ಹಾಗೂ ಆತನ ಸಹೋದರಿ ಸದಾ ಒಂದಿಲ್ಲೊಂದು ವಿಡಿಯೋಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಕೆಜಿಎಫ್ 2 ಚಿತ್ರದ ಡೈಲಾಗ್ ಹೊಡೆದು ಮತ್ತೆ ಸುದ್ದಿಯಾಗಿದ್ದಾರೆ.
ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಲಿ ಪೌಲ್ ಯಶ್ ಡೈಲಾಗ್ ಹೊಡೆದಿದ್ದು ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಪ್ರತಿ ಬಾರಿ ವಿಡಿಯೋ ಮಾಡುವಾಗಲು ತನ್ನ ಸಾಂಪ್ರದಾಯಿಕ, ಬುಡಕಟ್ಟು ಉಡುಪನ್ನು ಧರಿಸುತ್ತಿದ್ದ ಕಿಲಿಪೌಲ್ ಈ ಬಾರಿ ಡಿಫರೆಂಟ್ ಆಗಿ ಕಾಸ್ಟ್ಯೂಮ್ ಧರಿಸಿದ್ದಾರೆ. ಬಿಳಿ ಶರ್ಟ್ ಹಾಗೂ ಕಡು ನೀಲಿ ಬಣ್ಣದ ಸೂಟ್ ಧರಿಸಿ ಕಿಲಿಪೌಲ್ ಲಿಪ್ ಸಿಂಕ್ ಮಾಡಿದ್ದಾರೆ.
ಕಿಲಿ ಪೌಲ್ ವಿಡಿಯೋ ಶೇರ್ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಒಂದೇ ದಿನದಲ್ಲಿ 2.4 ಮಿಲಿಯನ್ ವೀಕ್ಷಣೆ ಕಂಡಿದ್ದು ಕಿಲಿ ಪೌಲ್ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.




