Latestಕೃಷಿವಿಶೇಷ

ಆಧುನಿಕ ಬೇಸಾಯ ಪದ್ಧತಿಯಲ್ಲಿ ಪಪ್ಪಾಯ ಬೆಳೆ: ಕಡಿಮೆ ಖರ್ಚು ಹೆಚ್ಚು ಲಾಭ

ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪ್ಪಾಯ ಉಳಿದ ಹಣ್ಣುಗಳಿಗೆ ಹೋಲಿಸಿದರೆ, ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಕರುಳಿನ ಆರೋಗ್ಯದವರೆಗೆ ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ. ಇಂತಹ ಪಪ್ಪಾಯ ಕೃಷಿ ಮಾಡೋದು ಹೇಗೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಈ ಪಪ್ಪಾಯ ಹಣ್ಣು ಇದ್ಯಲ್ಲಾ, ಇದ್ರಲ್ಲಿ ವಿಟಮಿನ್ ಸಿ ಜೊತೆಗೆ ಅಧಿಕ ಕಾರ್ಬೋಹೈಡ್ರೇಟ್ ಹಾಗೂ ಔಷಧೀಯ ಗುಣಗಳಿವೆ. ಆರೋಗ್ಯ ಕಾಪಾಡಿಕೊಳ್ಳಲು ಈ ಹಣ್ಣು ಸಹಕಾರಿಯಾಗಿದೆ. ಜೊತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಸಂಪಾದಿಸಬಹುದಾದಂತ ಬೆಳೆ ಇದು. ಅಲ್ಪ ಸಮಯದಲ್ಲಿ ಬೆಳೆಯೋ ಪಪ್ಪಾಯ ದೀರ್ಘಕಾಲದ ಫಸಲು ನೀಡುತ್ತೆ. ಪಪ್ಪಾಯವನ್ನು ಮೊದ್ಲು ದಕ್ಷಿಣ ಮೆಕ್ಸಿಕೋ ಮತ್ತು ಕೋಸ್ಟರಿಕಾದಲ್ಲಿ ಮಾತ್ರ ಬೆಳೆಯಲಾಗ್ತಿತ್ತು. ನಂತ್ರ ಇದು ಭಾರತಕ್ಕೂ ಹಬ್ಬಿತು. ಪ್ರಪಂಚಾದ್ಯಂತ ಪ್ರತಿ ವರ್ಷ ಆರು ಮಿಲಿಯನ್ ಟನ್ ಪಪ್ಪಾಯ ಬೆಳೆಯಲಾಗುತ್ತದೆ, ಅದರಲ್ಲಿ ಭಾರತವೊಂದೇ 3 ಮಿಲಿಯನ್ ಟನ್ ಪಪ್ಪಾಯ ಬೆಳೆಯುತ್ತೆ.

ಭಾರತದಲ್ಲಿ ಕರ್ನಾಟಕ, ಆಂಧ್ರ, ಗುಜರಾತ್, ಒರಿಸ್ಸಾ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪಪ್ಪಾಯ ಬೆಳೆಯಲಾಗುತ್ತೆ.

ಹಿಂದೆಲ್ಲಾ ಕೇವಲ ಮನೆ ಬಳಕೆಗೆ ಮಾತ್ರ ಬೆಳೀತಿದ್ದ ಪಪ್ಪಾಯವನ್ನು ಈಗ ವಾಣಿಜ್ಯ ಬೆಳೆಯನ್ನಾಗಿಸಿಕೊಂಡು ಬೆಳೆಯಲಾಗುತ್ತಿದೆ. ಪಪ್ಪಾಯದ ಸ್ಪೆಷಾಲಿಟಿ ಏನ್ ಗೊತ್ತಾ..? ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಅನ್ನೋದು. ಹಾಗಾಗಿನೇ ಇತ್ತೀಚೆಗೆ ಹೆಚ್ಚೆಚ್ಚು ರೈತರು ಪಪ್ಪಾಯದೆಡೆಗೆ ಆಕರ್ಷಿತರಾಗ್ತಿದ್ದಾರೆ. ಎಲ್ಲಾ ರೀತಿಯ ಮಣ್ಣಿನಲ್ಲೂ ಪಪ್ಪಾಯ ಬೆಳೆಯಬಹುದು. ಆದ್ರೆ ಕಪ್ಪು ಮಣ್ಣಾದ್ರೆ ಸೂಕ್ತ. ಹೆಚ್ಚು ಬಿಸಿಲಿರೋ ಪ್ರದೇಶದಲ್ಲಿ ಪಪ್ಪಾಯ ಬೆಳೆದ್ರೆ ಅನುಕೂಲ. ವರ್ಷದ ಎಲ್ಲಾ ಋತುಗಳಲ್ಲಿಯೂ ಎಲ್ಲಾ ಕಾಲಮಾನದಲ್ಲೂ ಪಪ್ಪಾಯ ಬೆಳೆಯಬಹುದು.

ಪಪ್ಪಾಯ ಗಿಡ ಭೂಮಿಯ ಮೇಲ್ಬಾಗ ಅಂದ್ರೆ ಸುಮಾರು 5 ರಿಂದ 6 ಅಡಿ ಎತ್ತರದವರೆಗೆ ಬೆಳೆಯುತ್ತೆ. ಹೀಗಾಗಿ ಕೆಳಭಾಗದಲ್ಲಿ ಮತ್ತೊಂದು ಬೆಳೆ ಬೆಳೆದು, ಅದ್ರಿಂದಾನೂ ಆದಾಯ ಪಡೆಯಬಹುದು. ಮೂರರಿಂದ 6 ತಿಂಗಳೊಳಗೆ ಬೆಳೆಯುವ ಪಪ್ಪಾಯ ಗಿಡ, ಕನಿಷ್ಠ ಪಕ್ಷ 3 ರಿಂದ 4 ವರ್ಷ ಫಸಲು ನೀಡುತ್ತೆ.

ಪಪ್ಪಾಯ ಗಿಡ ಬೆಳೆಸೋದು ತುಂಬಾ ಸುಲಭ. ಪಪ್ಪಾಯ ಗಿಡ ಬೆಳೆಸಲು ಹೆಚ್ಚಿನ ನೀರಿನ ಅವಶ್ಯಕತೆ ಇರೋದಿಲ್ಲ. ಬೇಸಿಗೆ ಕಾಲದಲ್ಲಿ ವಾರಕ್ಕೆ 2 ದಿನ ನೀರು ಕೊಟ್ರೂ ಸಾಕು. ಇನ್ನೊಂದೇನು ಅಂದ್ರೆ, ನೀರು ವ್ಯರ್ಥವಾಗೋದನ್ನು ತಡೆಯೋದಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡ್ರೆ ಒಳ್ಳೆಯದು.

ನೀರು ಕಡಿಮೆ ಇದ್ರೂ ನಡೆಯುತ್ತೇನೋ, ಆದ್ರೆ, ಪಪ್ಪಾಯ ಬೆಳೆಗೆ ಗೊಬ್ಬರ ಸ್ವಲ್ಪ ಜಾಸ್ತಿನೇ ಬೇಕು. ವರ್ಷದಲ್ಲಿ ಮೂರು ಬಾರಿ ಗಿಡಗಳಿಗೆ ಗೊಬ್ಬರ ಹಾಕ್ಬೇಕು. ಸೆಪ್ಟಂಬರ್, ನವೆಂಬರ್ ಹಾಗೂ ಜನವರಿ ತಿಂಗಳಲ್ಲಿ ಗೊಬ್ಬರ ಹಾಕಿದ್ರೆ ಉಪಯುಕ್ತ. ಪಪ್ಪಾಯಕ್ಕೂ ರೋಗ ತಗುಲುತ್ತೆ. ಎಲೆ ಮೇಲೆ ಸಣ್ಣಸಣ್ಣ ಕಪ್ಪು ಚುಕ್ಕೆಗಳು ಮೂಡ್ತವೆ. ಒಂದು ವೇಳೆ ಗಿಡಕ್ಕೆ ರೋಗ ಬಂದ್ರೆ ಸೂಕ್ತ ಔಷಧಿ ಸಿಂಪಡಿಸಬೇಕಾಗುತ್ತೆ. ಆದ್ರೆ, ಔಷಧಿಗಳನ್ನಾಗಲಿ, ರಾಸಾಯನಿಕ ಗೊಬ್ಬರಗಳನ್ನಾಗಲಿ ಹೆಚ್ಚು ಬಳಸಬಾರದು. ಸಾವಯವ ಗೊಬ್ಬರದಿಂದ ಪಪ್ಪಾಯ ಬೆಳೆದ್ರೆ ಆರೋಗ್ಯಕ್ಕೂ ಒಳ್ಳೇದು. ಹಣ್ಣು ಕೂಡ ರುಚಿಯಾಗಿರುತ್ತೆ.

ಪಪ್ಪಾಯಕ್ಕೆ ನಮ್ಮ ದೇಶದಲ್ಲೇ ಹೆಚ್ಚು ಬೇಡಿಕೆ ಇರೋದ್ರಿಂದ ಕೇವಲ 0.08 ರಷ್ಟು ಮಾತ್ರ ರಪ್ತು ಮಾಡಲಾಗುತ್ತೆ. ಭಾರತದಿಂದ ಬಹ್ರೈನ್, ಕುವೈತ್, ಖತಾರ್, ಸೌದಿ ಅರೇಬಿಯಾ ಹಾಗೂ ನೆದರ್ ಲ್ಯಾಂಡ್ ಗೆ ರಪ್ತು ಮಾಡಲಾಗುತ್ತೆ. ಪಪ್ಪಾಯದಲ್ಲಿ ವಿವಿಧ ತಳಿಗಳಿವೆ. ಅವುಗಳಲ್ಲಿ ಕರ್ನಾಟಕದಲ್ಲಿ ಕೂರ್ಗ್ ಹನಿ ಡ್ಯೂ, ಹನಿ ಡ್ಯೂ, ಪುಸಾ ನಹ್ನಾ, ಮತ್ತು ಪುಸಾ ಡಿಲಿಶಿಯಸ್ ಮುಂತಾದ ಪ್ರಬೇಧದ ಪಪ್ಪಾಯ ಬೆಳೆಯಲಾಗುತ್ತೆ.

ಪಪ್ಪಾಯ ಹಣ್ಣು ತುಂಬಾ ಮೃದುವಾಗಿರುವುದರಿಂದ ಹಣ್ಣನ್ನು ಮಾರುಕಟ್ಟೆಗೆ ಸಾಗಿಸುವಾಗ ಕೇರ್​ಫುಲ್ ಆಗಿರಬೇಕಾಗುತ್ತೆ. ಬಿದಿರು ಬೊಂಬಿನಲ್ಲಿ ಮಾಡಿದ ಬಾಕ್ಸ್ ಗಳಲ್ಲಿ ಬಾಳೆ ಎಲೆಯ ಮೇಲೆ ಪಪ್ಪಾಯ ಹಾಕಿ ಸಾಗಿಸಿದ್ರೆ ಬೆಟರ್. ದೆಹಲಿ ಮತ್ತು ಮುಂಬೈ ಪಪ್ಪಾಯಕ್ಕೆ ಪ್ರಮುಖ ಮಾರುಕಟ್ಟೆ ಇರೋ ನಗರಗಳು. ವರ್ಷದ ಎಲ್ಲಾ ಸೀಸನ್ ನಲ್ಲೂ ಈ ನಗರಗಳಲ್ಲಿ ಪಪ್ಫಾಯ ಹಣ್ಣು ಮಾರುಕಟ್ಟೆಗೆ ಪೂರೈಕೆಯಾಗುತ್ತೆ. ಒಂದು ಎಕರೆಯಲ್ಲಿ ಪಪ್ಪಾಯ ಬೆಳೆಯಲು ಕನಿಷ್ಠ 1 ಲಕ್ಷದ 25 ಸಾವಿರ ರೂಪಾಯಿ ಬೇಕಾಗುತ್ತೆ. ಇಳುವರಿ ಆರಂಭವಾದ ಮೇಲೆ ಮೊದಲ ವರ್ಷ 30 ಟನ್, ಎರಡನೇ ವರ್ಷ 25 ಟನ್ ಹಾಗೂ ಮೂರನೇ ವರ್ಷ 20 ಟನ್ ಬೆಳೆ ತೆಗೆಯಬಹುದು. ಪ್ರತಿ ಟನ್ ಗೆ ಮಾರುಕಟ್ಟೆಯಲ್ಲಿ 4500-5000 ರೂ ಬೆಲೆ ಇರುತ್ತೆ. ಪಪ್ಪಾಯ ಬೆಳೆಯಲು ಅಗ್ರಿಕಲ್ಚರ್ ಬ್ಯಾಂಕ್ ಗಳು ಲೋನ್ ಸಹ ನೀಡ್ತವೆ. ಇದರ ಸದ್ಭಳಕೆ ಮಾಡ್ಕೊಂಡು ಪಪ್ಪಾಯಾ ಕೃಷಿ ಮಾಡಿದ್ರೆ, ರೈತನಿಗೆ ಲಾಭಕ್ಕೇನು ಮೋಸವಿಲ್ಲ.

-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24×7 ಲೈವ್ ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button