
ನಿಮಗೆ ಅಗಸೆ ಗೊತ್ತಾ…? ಬೇಲಿ ಸಸ್ಯವಾಗಿ ಹಸುಗಳಿಗೆ ಆಹಾರವಾಗಿ, ಅಡುಗೆ ಮನೆಯಲ್ಲಿ ಜನಜನಿತವಾಗಿರೋ ಅಗಸೆ, ಕೃಷಿಯ ಒಂದು ಭಾಗವಾಗಿದೆ. ಅಗಸೆ ಕೃಷಿಯ ವಿಶೇಷ ಮಾಹಿತಿ ಇಲ್ಲಿದೆ ನೋಡಿ.
ಮನೆಯಂಗಳದಲ್ಲಿ ಹೂ ಗಿಡಗಳ ಜತೆಗೆ ಸುಲಭವಾಗಿ ಬೆಳೆಯಬಲ್ಲ ಅಗಸೆ ಹೂ ಕತ್ತಿಯ ಆಕೃತಿಯನ್ನ ಹೊಂದಿರುತ್ತೆ. ಹಾಗಾಗಿ ಇದನ್ನ ಕತ್ತಿ ಗಿಡ ಅಂತಲೂ ಕರಿತಾರೆ. ಕೆಂಪು, ಹಳದಿ, ಬಿಳಿ ಹೀಗೆ ಹಲವು ಬಣ್ಣಗಳಲ್ಲಿರೋ ಅಗಸೆ ದೊಡ್ಡ ಹಾಗೂ ಚಿಕ್ಕ ಗಾತ್ರದಲ್ಲಿಯೂ ಇರುತ್ತೆ. ಹೆಚ್ಚಾಗಿ ಬಿಳಿ ಬಣ್ಣದಲ್ಲಿ ಕಾಣಸಿಗುತ್ತದೆ. ಈ ಅಗಸೆಗೆ ಸುಗಂಧವಿಲ್ಲದಿದ್ರೂ ಅದರ ಮರದ ತೊಗಟೆ, ಬೇರು, ಎಲೆ, ಹೂ ಎಲ್ಲದರಲ್ಲೂ ರೋಗ ನಿರೋಧಕ ಗುಣವಿದೆ.
ಅಗಸೆಯ ಚಿಗುರೆಲೆ ಮತ್ತು ಬೀಜಗಳು ಅಡುಗೆಗೆ ಬಳಕೆಯಾಗುತ್ತದೆ. ಆದ್ರಿಂದ ಇದನ್ನ ನಾವು ಆಹಾರದ ಜೊತೆಗೆ ಸೇವಿಸಿದ್ರೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ನಮ್ಮ ಆಯುರ್ವೇದ ಗ್ರಂಥಗಳಲ್ಲಿ ಅಗಸೆಯ ಔಷಧೋಪಯೋಗದ ಬಗ್ಗೆಯೂ ಸಾಕಷ್ಟು ವಿವರಗಳಿವೆ.
ಅಗಸೆ ಗಿಡ ಬಲು ವೇಗವಾಗಿ ಬೆಳೆಯುತ್ತೆ. ಎರಡು ವರ್ಷಗಳಲ್ಲಿ ಅದು ಆರು ಮೀಟರ್ ಎತ್ತರಕ್ಕೆ ಬೆಳೆದು ನೀಳವಾದ ಕೊಂಬೆಗಳಲ್ಲಿ ಬಿಳಿಯ ಪುಟ್ಟ ಕ್ತತಿಗಳಂತೆ ಕಾಣಿಸುವ ಸಾಲು-ಸಾಲು ಹೂವುಗಳನ್ನು ಬಿಡುತ್ತದೆ. ಒಂದುವರೆಯಿಂದ ಮೂರು ಸೆ.ಮೀಟರ್ ತನಕ ಉದ್ದವಿರೋ ಈ ಹೂವುಗಳು ತಿಂಗಳ ಬೆಳಕಿಗೆ ನೋಡಿದ್ರೆ ಪುಟ್ಟ ಪಾರಿವಾಳಗಳಂತೆ ಭಾಸವಾಗುತ್ತೆ.

ವರ್ಷವಿಡೀ ಹೂಗಳಾಗೋದು ಅಗಸೆ ಗಿಡದ ವೈಶಿಷ್ಟ್ಯ. ಒಮ್ಮೆ ಅರಳಿದ ಹೂ ಎರಡು ದಿನ ಹಾಗೆ ಉಳಿಯುತ್ತೆ. ಅಗಸೆಯ ಚಿಗುರೆಲೆಗಳು ಪೋಷಕಾಂಶದ ಕಣಜವಾಗಿದೆ. ಇದನ್ನ ಪಲ್ಯ ಮಾಡಿ ಊಟಕ್ಕೆ ಬಳಸಬಹುದು. ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ರೋಗ ನಿರೋಧಕ ಬಲವನ್ನು ವೃದ್ಧಿಸುತ್ತದೆ. ಕಣ್ಣುಗಳ ಆರೋಗ್ಯಕ್ಕೂ ಇದು ಸಹಕಾರಿ. ಇದ್ರಲ್ಲಿ ಸಿ ಜೀವಸತ್ವವಿರೋದ್ರಿಂದ ಎಲುಬು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ. ಎ ಜೀವಸತ್ವ, ಕಬ್ಬಿಣ, ಸುಣ್ಣದ ಅಂಶಗಳಿರೋ ಈ ಸೊಪ್ಪು ಶಕ್ತಿದಾಯಕ.
ಜರ್ಮನಿಯ ಹೆಡಲ್ ಬರ್ಗ್ ನಲ್ಲಿರುವ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಗಸೆ ಬೀಜವನ್ನು ನಿತ್ಯ ಆಹಾರದೊಂದಿಗೆ ಬಳಸೋದ್ರಿಂದ ಸ್ತನ ಕ್ಯಾನ್ಸರನ್ನು ತಡೆಯಬಹುದು. ಅದ್ರಿಂದ ಸಂಭವಿಸೋ ಶೇ.40 ರಷ್ಟು ಮರಣವನ್ನು ಗೆಲ್ಲಬಹುದಂತೆ. ಇದು ಮೆದುಳಿಗೆ ಹರಿಯುವ ರಕ್ತನಾಳಗಳಲ್ಲಿರುವ ತೊಡಕನ್ನು ನಿವಾರಿಸುತ್ತದೆ. ಅಗಸೆ ಬೀಜದಿಂದ ತೆಗೆದ ತೈಲ ಅಥವಾ ಚೂರ್ಣವನ್ನು ಒಂದು ಚಮಚ ಪ್ರಮಾಣದಲ್ಲಿ ಊಟಕ್ಕೆ ಮುನ್ನ ದಿನವೂ ಸೇವಿಸೋದ್ರಿಂದ ಹೃದಯದ ಕಾಯಿಲೆ, ಸಂಧಿವಾತವನ್ನು ತಡೆಯಬಹುದು.
ಅಗಸೆ ಬೀಜವನ್ನ ಹದವಾದ ಮಣ್ಣಿನಲ್ಲಿ ಬಿತ್ತಿ, ಬೆಳಗ್ಗೆ ಮತ್ತು ಸಂಜೆ ನೀರು ಚಿಮುಕಿಸುತ್ತಿದ್ರೆ ಆರೇಳು ದಿನದಲ್ಲಿ ಬೀಜ ಮೊಳಕೆಯೊಡೆದು ಗಿಡವಾಗುತ್ತೆ. ಇದರ ಮರದ ಗುಣ ಮೃದುವಾಗಿದ್ದು, ವೀಳ್ಯೆದೆಲೆ ಬಳ್ಳಿಗೆ ಆಧಾರವಾಗಿಯೂ ನೆಡುವುದುಂಟು. ಅನೇಕ ವರ್ಷ ಬದುಕುವ ಮರ ಸತ್ತ ಮೇಲೆ ಒಲೆಗೆ ಉರುವಲಾಗಿಯೂ ಉಪಯೋಗಕ್ಕೆ ಬರುತ್ತೆ

ಅಗಸೆ ಗಿಡ ನಾಟಿ ಮಾಡೋದಕ್ಕೆ ಭೂಮಿ ಸ್ವಲ್ಪ ಫಲವತ್ತಾಗಿದ್ರೂ ಮರಳು ಮಿಶ್ರಿತ ಜೇಡಿಮಣ್ಣಿನಲ್ಲೂ ಗಿಡ ಹಸನಾಗಿ ಬರುತ್ತೆ. ರಾಸಾಯನಿಕ ಗೊಬ್ಬರ ಕೊಟ್ರೆ ಒಂದೇ ಎತ್ತರಕ್ಕೆ ಬೆಳೆಯೋದಿಲ್ಲವಾದ್ದರಿಂದ ಅದನ್ನ ಬಳಸೋದಿಲ್ಲ. ಆದ್ರೆ ಹೆಚ್ಚು ಗೊಬ್ಬರ ಕೊಟ್ರೆ ಉಳಿದ ಗೊಬ್ಬರ ಭೂಮಿಗೆ ಹರಡಿಕೊಂಡು ಸಹಾಯಕವಾಗುತ್ತೆ.
ಬೀಜವನ್ನು ಹಾಗೆ ಎರಚಬಹುದು ಅಥವಾ ಸಾಲಾಗಿ ಬಿತ್ತಬಹುದು. ಕೂರಿಗೆ ಹೊಡೆಯಬಹುದು.. ಭೂಮಿಯನ್ನು ಸಣ್ಣ ಪಾತಿಗಳನ್ನಾಗಿಸಿ, ಬಿತ್ತನೆ ಮಾಡಬಹುದು. ಸಾಮಾನ್ಯವಾಗಿ ಅಗಸೆಯನ್ನು ಉಪ ಬೇಸಾಯವಾಗಿಯೂ ಬೆಳೆಯಲಾಗುತ್ತದೆ. ಬೀಜ ಅರ್ಧಕ್ಕೆ ಬಲಿತಿರುವಾಗ ಅದು ಕೊಯ್ಲಿಗೆ ಸಿದ್ಧವಾಗಿರುತ್ತದೆ. ಗಿಡಗಳನ್ನು ಕೊಯ್ಲು ಮಾಡಿ ಬಿತ್ತನೆಗೂ ದನದ ಮೇವಿಗೂ ಬಳಸಬಹುದು, ಬೀಜವನ್ನು ಎಣ್ಣೆಗೂ ಬಳಸ್ತಾರೆ.
ಕೃಷಿ ಕ್ಷೇತ್ರದಲ್ಲಿ ದಿನೇ ದಿನೇ ಸಾಕಷ್ಟು ಬದಲಾವಣೆಗಳು ಆಗ್ತಾನೇ ಇರ್ತವೆ. ವಿಭಿನ್ನ ರೀತಿಯ ಬೆಳೆಗಳ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅಂತಹವುಗಳ ಬಗೆಗಿನ ಮಾಹಿತಿ ನೀಡಿ ಅನ್ನದಾತರ ಏಳಿಗೆಗೆ ನಮ್ಮ BMG 24×7 ಲೈವ್ ಕನ್ನಡ ಸದಾ ಬದ್ಧ.




