ಫಾರಿನ್ ಟೂರ್ ಮುಗಿಸಿದಷ್ಟು ಸುಲಭವಿದೆಯೇ ಯಡಿಯೂರಪ್ಪ ಅವರ ರಾಜ್ಯ ಪ್ರವಾಸ!?

ಕಿರುಗುಂದ ರಫೀಕ್
ಯಡಿಯೂರಪ್ಪ ಸಿಎಂ ಗದ್ದುಗೆಯಿಂದ ಕೆಳಗಿಳಿದು ಈಗಾಗಲೇ ಒಂದು ತಿಂಗಳು ಕಳೆದಿದೆ. ಈ ನಡುವೆ ತಮ್ಮ ಕುಟುಂಬ ಸದಸ್ಯರೊಂದಿಗೆ ಫಾರಿನ್ ಟೂರ್ ಮುಗಿಸಿ ಬಂದಿದ್ದಾರೆ. ಸದಾ ರಾಜಕೀಯ ಜಂಜಾಟದ ಮಧ್ಯೆ ಸಿಲುಕಿ ಹೈರಾಣಾಗಿದ್ದ ಅವರು ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಯಡಿಯೂರಪ್ಪ ರಾಜೀನಾಮೆಗೆ ಮೊದಲು ತಾವೊಂದು ನಿರ್ಧಾರ ಪ್ರಕಟಿಸಿದ್ದರು. ಚೌತಿ ಕಳೆದ ಮೇಲೆ ರಾಜ್ಯ ಪ್ರವಾಸ ಮಾಡುತ್ತೇನೆಂದು ಹೇಳಿಕೊಂಡಿದ್ದರು. ಆಗ ಎಲ್ಲವೂ ತಮ್ಮ ಅಣತಿಯಂತೆಯೇ ನಡೆಯುತ್ತಿದ್ದರಿಂದ ಅವರ ರಾಜ್ಯಪ್ರವಾಸದ ಘೋಷಣೆಗೂ ಒಂದು ತೂಕವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಅವರನ್ನು ಅದೇ ಸ್ಥಾನದಲ್ಲಿ ಉಳಿಸಿಕೊಳ್ಳಲು ಬಯಸಿದವರಿಗಿಂತ ತಾವೇ ಸಿಎಂ ಆಗಬೇಕೆಂದು ಬಯಸಿ ಹೊರಟ ನಾಯಕರ ದಂಡೇ ಹೆಚ್ಚಾಗಿತ್ತು. ಬಳಿಕ ವರಿಷ್ಠರು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ ಮೇಲೆ ಎಲ್ಲವೂ ಸುಖಾಂತ್ಯಗೊಳ್ಳಲಿಲ್ಲ. ಯಡಿಯೂರಪ್ಪ ಪರವುಳ್ಳವರು, ವಿರೋಧಿಗಳು ಎಲ್ಲರೂ ಒಳಗೊಳಗೇ ಕುದಿಯತೊಡಗಿ ಅಸಮಾಧಾನದ ಕೂಪವಾಗಿದೆ. ಹೀಗಿರುವಾಗ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ, ಪ್ರಯೋಜನವಾದರೂ ಏನು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.
ಆದರೆ ಯಡಿಯೂರಪ್ಪ ಸುಮ್ಮನೆ ಕೂರುವ ಜಾಯಮಾನದವರಲ್ಲ. ಹಿಂದಡಿ ಹೆಜ್ಜೆಯಿಟ್ಟಿರುವ ಅವರು ತಮ್ಮ ಮುಂದಿರುವ ರೇಖೆಯನ್ನು ದಾಟುವತ್ತ ಕಣ್ಣಿಟ್ಟಿದ್ದಾರೆ. ರಾಜಾಹುಲಿ ಎನ್ನುವ ಹೆಸರು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿಯೇ ರಾಜ್ಯಪ್ರವಾಸದ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಕುಟುಂಬ ಸಮೇತ ಫಾರಿನ್ ಗೆ ಹೋಗಿ ಬಂದಷ್ಟು ಈಜಿಯಾಗಿ ರಾಜ್ಯ ಪ್ರವಾಸ ಮಾಡುವುದು ಯಡಿಯೂರಪ್ಪಗೆ ಸಾಧ್ಯವಿದೆಯೇ!?
ಹೀಗಾಗಿ ಪ್ರವಾಸದ ರೂಪುರೇಷೆ ಬದಲಾಯಿಸಿಕೊಳ್ಳಲೇಬೇಕಾಗಿದೆ. ಏಕಾಂಗಿಯಾಗಿ ಪ್ರವಾಸ ಕೈಗೊಳ್ಳಲು ಯಡಿಯೂರಪ್ಪರಿಗೆ ಪಕ್ಷದ ಒಪ್ಪಿಗೆ ಸಿಗಲಾರದು. ಬದಲಿಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ, ತಮ್ಮ ಪ್ರವಾಸದ ಪಟ್ಟಿಯನ್ನು ತಯಾರಿಸಲು ತೀರ್ಮಾನಿಸಿರುವುದಾಗಿ ಈಗಾಗಲೇ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.
ಬಿಜೆಪಿ ಬ್ಯಾನರ್ ಅಡಿಯಲ್ಲಿ ಯಾವುದೇ ನಾಯಕರು ಪ್ರವಾಸ ಮಾಡಬೇಕಾದರೆ, ಪಕ್ಷದ ಒಪ್ಪಿಗೆ ಬೇಕು. ಅಲ್ಲದೆ, ನಿರ್ಧಿಷ್ಟ ವಿಷಯ ಆಧರಿಸಿ ಹೊರಡಬೇಕು. ಒಂದುವೇಳೆ ಇಂತಹ ನಿಯಮಗಳನ್ನು ಮೀರಿ ಪ್ರವಾಸ ಮಾಡಿದರೆ, ಆಗ ಯಡಿಯೂರಪ್ಪ ಪಕ್ಷದೊಳಗಿನ ತಮ್ಮ ವಿರೋಧಿಗಳೊಂದಿಗೆ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಸಂದೇಶ ಹೊರಬೀಳುತ್ತದೆ.
ಅಲ್ಲದೆ ಒಂಟಿ ಪ್ರವಾಸ ಮಾಡಿದರೂ ಕಾರ್ಯಕರ್ತರಿಗೆ, ಅವರ ಬೆಂಬಲಿಗರಿಗೆ ಬೇರೆಯೇ ಸಂದೇಶ ಹೋಗುತ್ತದೆ. ಹೀಗಾಗಿ ಇವೆಲ್ಲವನ್ನೂ ಅಳೆದೂ ತೂಗುತ್ತಿರುವ ಯಡಿಯೂರಪ್ಪ ಸದ್ಯ ಪಕ್ಷದ ಚೌಕಟ್ಟಿನಲ್ಲೇ ಹೆಜ್ಜೆ ಹಾಕಲು ನಿರ್ಧರಿಸಿರುವುದು ಗೋಚರವಾಗಿದೆ. ಒಟ್ಟಿನಲ್ಲಿ ಎಲ್ಲವೂ ‘ಚೌತಿ’ ಕಳೆದ ಮೇಲೆ ಸ್ಪಷ್ಟವಾಗಲಿದೆ.
ಒಂಟಿ ಪ್ರವಾಸ ಮಾಡಲಾರೆ:
ಗಣಪತಿ ಹಬ್ಬ ಮುಗಿದ ಮೇಲೆ ತಾವು, ಪಕ್ಷದ ಅಧ್ಯಕ್ಷರು, ಸಂಬಂಧಿಸಿದ ಸಚಿವರು, ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡಿ, ಯಾವ ಯಾವ ಜಿಲ್ಲೆಗಳಿಗೆ ಹೋಗಬೇಕು, ಪಕ್ಷದ ಸಂಘಟನೆ ಬಲಪಡಿಸಲು, ಮುಂದಿನ ಚುನಾವಣೆಗೆ ಸಿದ್ಧತೆ ದೃಷ್ಟಿಯಿಂದ ಚರ್ಚೆ ನಡೆಸಿ ಒಟ್ಟಾಗಿ ಪ್ರವಾಸ ಮಾಡುತ್ತೇವೆ. ನಾನು ಒಬ್ಬನೇ ಪ್ರವಾಸ ಮಾಡಲು ಇಷ್ಟವಿಲ್ಲ. ಪ್ರಮುಖರೆಲ್ಲಾ ಒಟ್ಟಾಗಿ ಚರ್ಚಿಸಿ, ದಿನಾಂಕ ನಿಗದಿ ಮಾಡಿ, ತೀರ್ಮಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
