ಡೋಪಿಂಗ್: ಪಾಸಿಟಿವ್ ಬಂದ ಆ ಅಥ್ಲೀಟ್ ಯಾರು?

- – ಸೋಮಶೇಖರ್ ಪಡುಕರೆ,
ಬೆಂಗಳೂರು : ಏಷ್ಯನ್ ಗೇಮ್ಸ್ ನಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ನ ಫಲಾನುಭವಿಯಾಗಿರುವ ಅಥ್ಲೀಟ್ ಒಬ್ಬರು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಿಂದ ವಂಚಿತರಾಗಿರುವುದು ಮಾತ್ರವಲ್ಲದೆ ಅವರ ಕ್ರೀಡಾ ಬದುಕು ಕೂಡ ಇಲ್ಲಿಗೇ ಕೊನೆಗೊಳ್ಳುವ ಸಾಧ್ಯತೆ ಇದೆ. ಕಾರಣ ಅವರ ಡೋಪಿಂಗ್ ವರದಿ ಪಾಸಿಟಿವ್. ಆದರೆ ಆ ಅಥ್ಲೀಟ್ ಹೆಸರು ಇನ್ನೂ ಬಹಿರಂಗಗೊಂಡಿಲ್ಲ.!!
ಕ್ರೀಡಾಪಟುವೊಬ್ಬರು ಸಾಧನೆ ಮಾಡಿದಾಗ ನಾವೆಲ್ಲ ಸಂಭ್ರಮಿಸುತ್ತೇವೆ, ನಮ್ಮ ಕ್ರೀಡಾಪಟುಗಳು ಗೆದ್ದ ಬೆಳ್ಳಿ ಚಿನ್ನವಾದಾಗ ಅಂದರೆ ಬೇರೆ ದೇಶದ ಕ್ರೀಡಾಪಟುಗಳು ಡೋಪಿಂಗ್ ನಲ್ಲಿ ಸಿಕ್ಕಿಬಿದ್ದಾಗಲೂ ನಾವು ಖುಷಿ ಪಟ್ಟಿದ್ದೇವೆ. ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಸಿಗದಿದ್ದಾಗ ಮಾಧ್ಯಮಗಳು ಧ್ವನಿ ಎತ್ತಿ ನೆರವಿಗೆ ಬಂದಿವೆ. ಉತ್ತಮ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸ, ಅಂತಾರಾಷ್ಟ್ರೀಯ ಮಟ್ಟದ ತರಬೇತಿಗೆ ನೆರವು, ಸಮಾಜದಲ್ಲಿ ಗೌರವ ಹೀಗೆ ಪ್ರತಿಯೊಂದು ರೀತಿಯಲ್ಲಿ ಉನ್ನತ ಸ್ಥಾನ ಕಲ್ಪಿಸಿರುವ ಕ್ರೀಡೆಗೆ ಕೊನೆಯಲ್ಲಿ ನಾವು ಮತ್ತೆ ಮತ್ತೆ ಗೆಲ್ಲಬೇಕೆಂದು ಡೋಪಿಂಗ್ ನಲ್ಲಿ ತೊಡಗಿಕೊಳ್ಳುವುದು ನಾವು ನಮ್ಮ ಹೆತ್ತವರಿಗೆ, ಸಮಾಜಕ್ಕೆ ಮತ್ತು ನಾವು ಪ್ರತಿನಿಧಿಸುತ್ತಿರುವ ದೇಶಕ್ಕೆ ಮಾಡುವ ಅವಮಾನ.

ರಾಷ್ಟ್ರೀಯ ಉದ್ದೀಪನ ಔಷಧ ನಿಯಂತ್ರಣ ಘಟಕ (ನಾಡಾ) ಮಾರ್ಚ್ ತಿಂಗಳಲ್ಲಿ 4 400 ಮೀಟರ್ ಮಿಶ್ರ ರಿಲೇ ತಂಡದ ಮಾದರಿ ಪರೀಕ್ಷೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿತ್ತು. ಈ ಗೊಂದಲದಿಂದಾಗಿ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ ಆಗಿರುವ ಭಾರತ ರಿಲೇ ತಂಡ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ರಷ್ಯಾದ ಕೋಚ್ ಗಾಲಿನಾ ಬುಖಾರಿನಾ ಮತ್ತು ಭಾರತದ ಕೋಚ್ ರಾಧಾಕೃಷ್ಣನ್ ನಾಯರ್ ಅವರಲ್ಲಿ ರಾಷ್ಟ್ರೀಯ ಕ್ಯಾಂಪ್ ನಲ್ಲಿ ತರಬೇತಿ ಪಡೆಯುತ್ತಿರುವ ತಂಡದಲ್ಲಿ ಒಂದು ಪಾಸಿಟಿವ್ ಕಂಡು ಬಂದಿದ್ದು ಒಲಿಂಪಿಕ್ಸ್ ಗೆ ಹೊರಟ ಈ ಸಂದರ್ಭದಲ್ಲಿ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಗೆ ಮುಜುಗರ ಆಗಿರುವುದು ಸಹಜ.
ಭಾರತದಿಂದ ಒಲಿಂಪಿಕ್ಸ್ ಗೆ ಹೊರಟಿರು ಕ್ರೀಡಾಪಟುಗಳ ಪಡೆಯಲ್ಲಿ ಇಬ್ಬರು ಅಥ್ಲೀಟ್ ಗಳು ಡೋಪಿಂಗ್ ನಲ್ಲಿ ಪಾಸಿಟಿವ್ ಬಂದಿರುವುದು ಸಾಬೀತಾಗಿರುವ ಅಂಶವನ್ನು ನಾಡಾದ ಮಹಾ ನಿರ್ದೇಶಕ ನವೀನ್ ಅಗರ್ವಾಲ್ ಎರಡು ತಿಂಗಳ ಹಿಂದೆಯೇ ಖಚಿತಪಡಿಸಿದ್ದಾರೆ. ಆದರೆ ಅವರು ಕ್ರೀಡಾಪಟುಗಳ ಹೆಸರನ್ನು ಬಯಲು ಮಾಡಲು ನಿರಾಕರಿಸಿದ್ದಾರೆ. ಕ್ರೀಡಾಪಟುಗಳು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಡ್ರಗ್ಸ್ ಸೇವನೆ ಮಾಡಿದರೆ ಇನ್ನು ಕೆಲವೊಮ್ಮೆ ಸೇವಿಸುವ ಆಹಾರದಲ್ಲಿ ಮೂಲಕ ಅರಿವಿಲ್ಲದಂತೆ ದೇಹವನ್ನು ಸೇರಿಕೊಳ್ಳುವುದಿದೆ. ಏನೇ ಆದರೂ ಅದು ಕ್ರೀಡಾ ವಲಯದಲ್ಲಿ ಮುಜುಗರವನ್ನು ಉಂಟುಮಾಡುತ್ತದೆ.
ಶಿಬಿರದಲ್ಲಿರುವವರಿಗೆ ಮಾತ್ರ ಅವಕಾಶ:
ಅಂತಋರಾಷ್ಟ್ರೀಯ ಆಯ್ಕೆ ಟ್ರಯಲ್ಸ್ ಗೆ ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆ ಸುಪ್ರಿಂ ಕೋರ್ಟ್ ನ ಆದೇಶ ಮತ್ತು ಎಎಫ್ಐ ನಿಯಮದಂತೆ ರಾಷ್ಟ್ರೀಯ ಶಿಬಿರದಲ್ಲಿರುವ ಅಥ್ಲೀಟ್ ಗಳನ್ನು ಮಾತ್ರ ಆಯ್ಕೆ ಮಾಡುತ್ತದೆ. 400 ಮೀ. ಓಟದಲ್ಲಿ ಯಾರು ಅಗ್ರ ಸ್ಥಾನ ಪಡೆಯುತ್ತರೋ ಅವರನ್ನು ರಿಲೇ ತಂಡದಲ್ಲಿ ಓಡಿಸುವುದು ಸಾಮಾನ್ಯ. ಈ ಬಾರಿಯ ಫೆಡರೇಷನ್ ಕಪ್ ನ 400 ಮೀ. ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಕರ್ನಾಟಕದ ಎಂ.ಆರ್. ಪೂವಮ್ಮ ಅವರನ್ನು ಹಿಂದಿಕ್ಕಿದ ಕರ್ನಾಟಕದವರೇ ಆದ ಪ್ರಿಯಾ ಮೋಹನ್ ಅಗ್ರ ಸ್ಥಾನಿಯಾದರು. ಆದರೆ ರಾಷ್ಟ್ರೀಯ ಶಿಬಿರದಲ್ಲಿದ್ದ ಕಾರಣ ಅವರನ್ನು ಒಲಿಂಪಿಕ್ಸ್ ಗೆ ಆಯ್ಕೆ ಮಾಡಿರಲಿಲ್ಲ.
ಕಳೆದ ಭಾನುವಾರ 4 400 ಮೀಟರ್ ಮಿಶ್ರ ರಿಲೇ ತಂಡದ ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಎರಡು ದಿನಗಳ ಹಿಂದೆ ಹಿನ್ನಡೆ ಕಂಡಿದ್ದ ಓಟಗಾರರನ್ನು ಅಂಗಣಕ್ಕಿಳಿಸಲಾಯಿತು. ಅದರಲ್ಲಿ ತಮಿಳುನಾಡಿನ ರೇವತಿ 53.55 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನಿಯಾಗಿ ರಿಲೇ ತಂಡವನ್ನು ಸೇರಿಕೊಂಡರು. 53.29 ಸೆಕೆಂಡುಗಳಲ್ಲಿ ಗುರಿ ತಲುಪಿದ ಪ್ರಿಯಾ ಮೋಹನ್ ಗೆ ಅವಕಾಶ ಸಿಗಲಿಲ್ಲ ಏಕೆಂದರೆ ಅವರು ರಾಷ್ಟ್ರೀಯ ಶಿಬಿರದಲ್ಲಿ ಇರಲಿಲ್ಲ. ಕ್ರೀಡಾಪಟುಗಳು ಹೊರಗಡೆ ಇದ್ದರೆ ಫಿಟ್ ಆಗಿ ಇರುವುದಿಲ್ಲ ಮತ್ತು ಡ್ರಗ್ಸ್ ಸೇವನೆಯಂಥ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಅವರನ್ನು ರಾಷ್ಟ್ರೀಯ ಶಿಬಿರದಲ್ಲಿ ಇರಿಸಲಾಗುತ್ತದೆ. ಆದರೆ ಶಿಬಿರದಲ್ಲಿ ಇರುವವರೇ ನಿಷೇಧಿತ ಡ್ರಗ್ ಸೇವನೆ ಮಾಡಿರುವುದು ಸಾಬೀತಾಗಿರುವಾಗ ನಮ್ಮ ತರಬೇತಿ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹುಟ್ಟದಿರದು.




