
ಅಹಮದಾಬಾದ್ (ಗುಜರಾತ್): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರದೇ ಪಕ್ಷದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಎರಡು ದಿನಗಳ ನಗರ ಭೇಟಿಯ ಭಾಗವಾಗಿ ಶನಿವಾರ ಅಹಮದಾಬಾದ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಆಮ್ ಆದ್ಮಿ ಪಕ್ಷದ ಇಬ್ಬರೂ ನಾಯಕರು ಶುಕ್ರವಾರ ರಾತ್ರಿ ಅಹಮದಾಬಾದ್ಗೆ ಆಗಮಿಸಿದ್ದರು.
ಬಿಜೆಪಿ ಆಡಳಿತವಿರುವ ಗುಜರಾತ್ಗೆ ಅವರ ಭೇಟಿಯು ಈ ವರ್ಷದ ಅಂತ್ಯದ ವೇಳೆಗೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಪಕ್ಷಕ್ಕೆ ಅಡಿಪಾಯವನ್ನು ಸಿದ್ದಪಡಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ.
ಕೇಜ್ರಿವಾಲ್ ಮತ್ತು ಮನ್ ಸಬರಮತಿ ಆಶ್ರಮದ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರು ತಂಗುತ್ತಿದ್ದ ಸ್ಥಳವಾದ ಹೃದಯ್ ಕುಂಜ್ಗೆ ಪ್ರವಾಸ ಕೈಗೊಂಡರು ಮತ್ತು ಅಲ್ಲಿನ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿದ ನಂತರ ಗಾಂಧೀಜಿ ಪ್ರತಿಮೆಗೆ ನಮಸ್ಕರಿಸಿದರು. ಆಶ್ರಮದಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. ಅಲ್ಲಿ ಅದರ ಅಧಿಕಾರಿಗಳೂ ಅವರಿಗೆ ಚಿಕಣಿ ಚರಖಾ ಮತ್ತು ಮಹಾತ್ಮಾ ಗಾಂಧಿಯವರ ಜೀವನದ ಪುಸ್ತಕಗಳನ್ನು ಸ್ಮರಣಿಕೆಯಾಗಿ ನೀಡಿದರು. ಮುಖ್ಯಮಂತ್ರಿಯಾದ ನಂತರ ಸಬರಮತಿ ಆಶ್ರಮಕ್ಕೆ ಕೇಜ್ರಿವಾಲ್ರವರ ಮೊದಲ ಭೇಟಿ ಇದಾಗಿದೆ.




