
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಇದೀಗ ಲತಾ ಮಂಗೇಶ್ಕರ್ ಚಿತ್ರರಂಗದಿಂದ ಕಂಬನಿ ಮಿಡಿದಿದ್ದಾರೆ. ಸ್ಯಾಂಡಲ್ವುಡ್ನ ದಿಗ್ಗಜರು ಲತಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಕೆಲವರು ಲತಾ ಕಂಠದಲ್ಲಿ ಮೂಡಿಬಂದ ಹಾಡಿನಲ್ಲಿ ತಮ್ಮಿಷ್ಟದ ಸಾಂಗ್ ಯಾವುದು ಎನ್ನುವ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಶಿವಣ್ಣ ಕಂಬನಿ: ನಟ ಶಿವರಾಜ್ಕುಮಾರ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಲತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಲತಾ ಅವರ ಫೋಟೋ ಪೋಸ್ಟ್ ಮಾಡಿ, ನನ್ನ ಅತ್ಯಂತ ನೆಚ್ಚಿನ ಧ್ವನಿ. ಸಂಗೀತದ ಮೂಲಕ ಹಲವು ಭಾವನೆಗಳನ್ನು ಅನುಭವಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ರಮೇಶ್ ಅರವಿಂದ್:
ಖ್ಯಾತ ನಟ ರಮೇಶ್ ಅರವಿಂದ್ ಅವರಿಗೂ ಲತಾ ನಿಧನದ ಸುದ್ದಿ ದುಃಖ ತಂದಿದೆ. ಲತಾ ಅವರ ಫೋಟೋ ಪೋಸ್ಟ್ ಮಾಡಿರುವ ರಮೇಶ್ ಅರವಿಂದ್ ಅವರು, ವಿದಾಯ, ಸಂಗೀತದ ಸ್ವರಗಳು ಸ ರಿ ಗ ಮ ಪ ಲ ತಾ ಎಂಬಂತೆ ನಮಗೆ ಭಾಸವಾಗುವಂತೆ ಮಾಡಿದಿರಿ ಎಂದು ಬರೆದುಕೊಂಡಿದ್ದಾರೆ.
ಟಿ.ಎನ್. ಸೀತಾರಾಮ್: ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಕೂಡ ಲತಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ನೆಚ್ಚಿನ ಹಾಡುಗಳನ್ನು ನೆನಪು ಮಾಡಿಕೊಂಡಿದ್ದಾರೆ. ‘ನಾನು ಕಾಲೇಜಿಗೆ ಹೋಗುತ್ತಿದ್ದ ಸಮಯ. ‘ಬೀಸ್ ಸಾಲ್ ಬಾದ್’ ಚಿತ್ರ ತೆರೆಗೆ ಬಂದಿತ್ತು. ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋಕೆ ಹೋಗಿದ್ವಿ. ಆ ಸಿನಿಮಾದ ಹಾಡಿಗಾಗಿ, ಮೂರು ದಿನ ಸತತ ಅದೇ ಚಿತ್ರ ನೋಡಿದ್ದೆ. ಈ ಚಿತ್ರದ ಹಾಡುಗಳಿಗೆ ಲತಾ ಧ್ವನಿ ನೀಡಿದ್ದರು ಎಂದಿದ್ದಾರೆ’ ಸೀತಾರಾಮ್.



